ಬರ್ಮಿಂಗ್ಹ್ಯಾಮ್: ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದರೆ ಹೇಗೆ ವಿಶ್ವದೆಲ್ಲೆಡೆ ಸಂಚಲನ ಮೂಡುವುದೋ ಹಾಗೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಎದುರು ಬದುರಾದಾಗ ಅದೇ ಸನ್ನಿವೇಶ ನಿರ್ಮಿತವಾಗಿರುತ್ತದೆ. ಇಂದಿನಿಂದ ಟೆಸ್ಟ್ ಇತಿಹಾಸದ ಪ್ರಮುಖ ಸರಣಿಯಾದ ಆ್ಯಶಸ್ ಶುರುವಾಗಲಿದ್ದು, ಆ ಸರಣಿ ಕುರಿತ ಕುತೂಹಲಕಾರಿ ಅಂಶಗಳು ಇಲ್ಲಿದೆ.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಸರಣಿಗೆ ಆ್ಯಶಸ್ ಹೆಸರು ಬರಲು ಕಾರಣ?
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಸರಣಿಗೆ ‘ಆ್ಯಶಸ್’ ಎಂದು ಹೆಸರು ಬಂದಿರುವುದರ ಹಿಂದೆ ಒಂದು ರೋಚಕ ಕಥೆ ಇದೆ. 1982 ರಲ್ಲಿ ಈ ಎರಡು ತಂಡಗಳ ನಡುವೆ ಒಂದು ಪಂದ್ಯದ ಟೆಸ್ಟ್ ಸರಣಿ ನಡೆದಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿತ್ತು. ಪಂದ್ಯದ ನಂತರ ಇಂಗ್ಲೆಂಡ್‌ನ 'ಸ್ಪೋರ್ಟಿಂಗ್ ಟೈಮ್ಸ್' ದಿನಪತ್ರಿಕೆ ಇಂಗ್ಲೆಂಡ್ ಕ್ರಿಕೆಟ್ ಈಗ ಸತ್ತುಹೋಗಿದೆ, ಅದರ ಅಂತ್ಯಕ್ರಿಯೆ ಮಾಡಿ ಆಸ್ಟ್ರೇಲಿಯಾ ಚಿತಾಭಸ್ಮವನ್ನು ಆಸ್ಟ್ರೇಲಿಯಾಕ್ಕೆ ಕೊಂಡೊಯ್ಯಲಾಗಿದೆ ಎಂದು ಪ್ರಕಟಿಸಿತ್ತಂತೆ. ಇದು ಇಂಗ್ಲೆಂಡ್ನಲ್ಲಿ ಬಾರಿ ಸಂಚಲನ ಮೂಡಿಸಿತ್ತಂತೆ.
ಆದರೆ, ಇದನ್ನು ಸವಾಲಾಗಿ ಸ್ವೀಕರಿಸಿದ ಇಂಗ್ಲೆಂಡ್ ತಂಡ ಮರು ವರ್ಷ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಆಗ ಇಂಗ್ಲೆಂಡ್ ತಂಡದ ನಾಯಕ ಇವೊ ಬ್ಲಿಗ್ ಪ್ರವಾಸಕ್ಕೆ ತೆರಳುವ ಮುನ್ನ 'ಆಸ್ಟ್ರೇಲಿಯಾ ನಮ್ಮ ನೆಲದಿಂದ ತೆಗೆದುಕೊಂಡು ಹೋಗಿರುವ ಚಿತಾಭಸ್ಮವನ್ನು ಮರಳಿ ತರುತ್ತೇನೆ' ಎಂದು ಹೇಳಿದ್ದರು. ಹೇಳಿದಂತೆ 3 ಪಂದ್ಯಗಳ ಸರಣಿಯನ್ನು ಬ್ಲಿಗ್ ಪಡೆ 2-1ರಲ್ಲಿ ಗೆದ್ದು ತಂದಿತ್ತು. ಆ ಸಂದರ್ಭದಲ್ಲಿ ಮೆಲ್ಬರ್ನ್‌ನ ಮಹಿಳೆಯರ ಗುಂಪೊಂದು ಮರದ ತುಂಡುಗಳನ್ನು ಸುಟ್ಟು ಅದರ ಬೂದಿಯನ್ನು ಸಂಗ್ರಹಿಸಿ ಮಾಡಿದ್ದ ಚಿಕ್ಕ ಟ್ರೋಫಿಯನ್ನು ಬ್ಲಿಗ್ ಅವರಿಗೆ ನೀಡಿತ್ತು.
ಅಂದು ಅದನ್ನು ಹಲವರು ಆಸ್ಟ್ರೇಲಿಯಾ ಕ್ರಿಕೆಟ್‌ನ ಚಿತಾಭಸ್ಮ ಎಂದು ಕರೆದಿದ್ದರಂತೆ. ಆದರೆ ಅದನ್ನು ಇವೋ ಬ್ಲಿಗ್‌ಗೆ ಆ ಮಹಿಳೆಯರ ಗುಂಪು ನೀಡಿದ್ದ ಉಡುಗೊರೆಯಾಗಿತ್ತು. 1927ರಲ್ಲಿ ಇವೋ ಬ್ಲಿಗ್ ನಿಧನರಾದ ಬಳಿಕ ಅದನ್ನು ಎಂಸಿಸಿಗೆ(Marylebone Cricket Club ಈಗಿನ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್) ನೀಡಲಾಗಿತ್ತು. ಆ ನಂತರದ ದಿನಗಳಲ್ಲಿ ಇದೇ ಆ್ಯಶಸ್ ಟ್ರೋಫಿಯಾಗಿ ಬದಲಾಗಿ, ಸರಣಿ ಗೆದ್ದ ತಂಡಕ್ಕೆ ನೀಡುವ ಪ್ರತೀತಿ ಬೆಳೆದುಬಂದಿದೆ.