ನವದೆಹಲಿ:ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ನಿವೃತ್ತಿ ಬಗ್ಗೆ ಈ ಹಿಂದಿನಿಂದಲೂ ಅನೇಕ ರೀತಿಯ ಮಾತು ಕೇಳಿ ಬರುತ್ತಿದ್ದು, ಇದೀಗ ಹರ್ಭಜನ್ ಸಿಂಗ್ ಕೂಡ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಖಂಡಿತವಾಗಿ ಆಡಲಿದ್ದಾರೆ. ಆದರೆ ಮತ್ತೊಮ್ಮೆ ಟೀಂ ಇಂಡಿಯಾ ಪರ ಆಡುವುದು ಅನುಮಾನ. ಈಗಾಗಲೇ ಅವರು ಭಾರತದ ಪರ ತಮ್ಮ ಆಟ ಮುಗಿಸಿದ್ದು, ಮತ್ತೊಮ್ಮೆ ನೀಲಿ ಜರ್ಸಿ ಧರಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
2019ರ ಐಸಿಸಿ ವಿಶ್ವಕಪ್ ಸೆಮಿಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಸೋಲು ಕಂಡ ಬಳಿಕ ಧೋನಿ ಟೀಂ ಇಂಡಿಯಾ ಪರ ಕ್ರಿಕೆಟ್ ಪಂದ್ಯಗಳಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಅವರು ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಳ್ಳಲಿದ್ದಾರೆ ಎಂಬ ಮಾತು ಅನೇಕ ಸಲ ಕೇಳಿ ಬಂದಿವೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಧೋನಿ ನೀಡುವ ಪ್ರದರ್ಶನದ ಮೇಲೆ ಟಿ-20 ವಿಶ್ವಕಪ್ನಲ್ಲಿ ಸ್ಥಾನ ಪಡೆದುಕೊಳ್ಳುವುದು ನಿರ್ಧಾರಗೊಳ್ಳಲಿದೆ ಎಂದಿದ್ದರು. ಆದರೆ ಕೊರೊನಾ ಅಬ್ಬರ ಜೋರಾಗಿರುವ ಕಾರಣ ಐಪಿಎಲ್ ಮುಂದೂಡಿಕೆಯಾಗಿದೆ. ಮಹೇಂದ್ರ ಸಿಂಗ್ ಧೋನಿ ಹಾಗೂ ಹರ್ಭಜನ್ ಸಿಂಗ್ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ.