ಮುಂಬೈ:ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ-20 ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಸರಣಿ ಗೆದ್ದ ಭಾರತ ತಂಡವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿನಂದಿಸಿದ್ದಾರೆ.
ಭಾರತ ತಂಡ ಸರಣಿ ಸೋಲುತ್ತದೆ ಎಂದು ಯಾರೂ ನಿರೀಕ್ಷಿಸೋದಿಲ್ಲ. ಹಾಗಾಗಿ ಗೆಲುವು ಯಾವುದೇ ರೀತಿಯ ಅಚ್ಚರಿ ನೀಡಿಲ್ಲ. ಭಯವಿಲ್ಲದ ಬ್ಯಾಟಿಂಗ್ ಹೇಗೆ ಹೊರಬರುತ್ತದೆ ಎಂಬುದನ್ನು ಇಂದಿನ ಟಿ20ಯಲ್ಲಿ ನಾವು ನೋಡಿದ್ದೇವೆ. ಇಲ್ಲಿ ಯಾರೊಬ್ಬರೂ ತನ್ನ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕೆ ಆಡುವುದಿಲ್ಲ. ಬದಲಾಗಿ ಎಲ್ಲರೂ ಆಡುವುದು ತಂಡದ ಗೆಲುವಿಗಾಗಿ ಎಂದು ಭಾರತ ತಂಡದ ಗೆಲುವನ್ನು ಟ್ವೀಟರ್ ಮೂಲಕ ಗಂಗೂಲಿ ವಿಶ್ಲೇಷಿಸಿ ಅಭಿನಂದಿಸಿದ್ದಾರೆ.
ಮುಂಬೈನ ವಾಂಖೆಡೆಯಲ್ಲಿ ನಡೆದ ಮೂರನೇ ಟಿ20ಯಲ್ಲಿ ಭಾರತದ ಆರಂಭಿಕರಾದ ರೋಹಿತ್ (34 ಬಾಲ್‌ಗೆ 71), ರಾಹುಲ್(56 ಬಾಲ್‌ಗೆ 91) ಹಾಗೂ ನಾಯಕ ಕೊಹ್ಲಿ (29 ಬಾಲ್‌ಗೆ 70) ಸ್ಫೋಟಕ ಬ್ಯಾಟಿಂಗ್ ನಡೆಸಿ 240 ರನ್‌ಗಳ ಬೃಹತ್ ಮೊತ್ತ ದಾಖಲಿಸಲು ನೆರವಾಗಿದ್ದರು.
241 ರನ್‌ಗಳ ಭಾರಿ ಗುರಿ ಪಡೆದಿದ್ದ ವಿಂಡೀಸ್‌ನ ಪೊಲಾರ್ಡ್(68), ಶಿಮ್ರಾನ್ ಹೆಟ್ಮೈರ್(41) ಅವರ ಭರ್ಜರಿ ಬ್ಯಾಟಿಂಗ್ ಹೊರತಾಗಿಯೂ 173 ರನ್ಗಳಿಸಲಷ್ಟೇ ಶಕ್ತವಾಗಿ 67 ರನ್ಗಳಿಂದ ಸೋಲುಕಂಡಿತು.
ಪಂದ್ಯದುದ್ದಕ್ಕೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ದೀಪಕ್ ಚಹಾರ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.