ಮುಂಬೈ: ವಿಶ್ವದಲ್ಲೇ ಅತ್ಯುತ್ತಮ ಟಿ-20 ಲೀಗ್ ಆಗಿರುವ ಐಪಿಎಲ್ ಹಿಂದಿನ ಆವೃತ್ತಿಗಳಂತೆ ಭಾರತೀಯ ಕ್ರಿಕೆಟ್ಗೆ ಯುವ ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದೆ.
ನಗದು ಸಮೃದ್ಧ ಲೀಗ್ ನೀಡಿದ ಅವಕಾಶಗಳನ್ನು ಯುವ ಕ್ರಿಕೆಟಿಗರು ಎಷ್ಟರ ಮಟ್ಟಿಗೆ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆಂದರೆ 2 ತಿಂಗಳ ಹಿಂದೆ ಅವರು ಯಾರೆಂದು ತಿಳಿದಿರಲಿಲ್ಲ, ಇಂದು ಅವರ ಹೆಸರು ವಿಶ್ವ ಕ್ರಿಕೆಟ್ನಲ್ಲಿ ರಾರಾಜಿಸುತ್ತಿದೆ. ಅದಕ್ಕೆ ಐಪಿಎಲ್ ಒಂದು ಮೆಟ್ಟಿಲಾಗಿ ಕಾರ್ಯನಿರ್ವಹಿಸುವ ಜೊತೆಗೆ ಅಂತಹ ಗುಂಪುಗಳನ್ನು ದೊಡ್ಡ ಸಂಖ್ಯೆಯನ್ನಾಗಿಸಲು ಸಹಕರಿಸುತ್ತಿದೆ ಎಂದರೆ ತಪ್ಪಾಗಲಾರದು.
ರವಿ ಬಿಷ್ಣೋಯ್, ರಾಹುಲ್ ತೆವಾಟಿಯಾ, ದೇವದತ್ ಪಡಿಕ್ಕಲ್, ಟಿ ನಟರಾಜನ್, ಕಾರ್ತಿಕ್ ತ್ಯಾಗಿ ಮುಂತಾದ ಯುವ ಕ್ರಿಕೆಟಿಗರು ಐಪಿಎಲ್ನಲ್ಲಿ ತಮ್ಮ ಪ್ರತಿಭೆ ಮತ್ತು ಕೌಶಲ್ಯದಿಂದ ಕ್ರಿಕೆಟ್ ಪಂಡಿತರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.
ರವಿ ಬಿಷ್ಣೋಯ್
ಲೆಗ್ ಸ್ಪಿನ್ನರ್ ಆಗಿರುವ ರವಿ ಬಿಷ್ಣೋಯ್ 2019ರ ಅಂಡರ್ 19 ವಿಶ್ವಕಪ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದರು. ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಕಳೆದ ಐಪಿಎಲ್ನಲ್ಲಿ ಖರೀದಿಸಿತ್ತು. ಈಗಾಗಲೆ 13ನೇ ಆವೃತ್ತಿಯ ಐಪಿಎಲ್ನಲ್ಲಿ 10 ಪಂದ್ಯಗಳಿಂದ 9 ವಿಕೆಟ್ ಪಡೆದಿರುವ ಅವರು ಪಂಜಾಬ್ನ ಟಾಪ್ ಬೌಲರ್ಗಳಲ್ಲಿ ಒಬ್ಬರಾಗಿದ್ದಾರೆ.
ಬಿಷ್ಣೋಯ್ ಈ ಋತುವಿನಲ್ಲಿ ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೋವ್, ರಿಷಭ್ ಪಂತ್, ಇಯಾನ್ ಮಾರ್ಗನ್, ಸೇರಿದಂತೆ ಕೆಲವು ಟಾಪ್ ಬ್ಯಾಟ್ಸ್ಮನ್ಗಳಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ. ಕೋಚ್ ಅನಿಲ್ ಕುಂಬ್ಳೆ ಬೌಲಿಂಗ್ ಶೈಲಿಯನ್ನು ಹೊಂದಿರುವ ಫ್ಲಿಪ್ಪರ್ಸ್, ಟಾಪ್ ಸ್ಪಿನ್ನರ್ಸ್ ಮತ್ತು ಪರಿಣಾಮಕಾರಿ ಗೂಗ್ಲಿಗಳನ್ನು ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ.
ದೇವದತ್ ಪಡಿಕ್ಕಲ್
ಕರ್ನಾಟಕದ ದೇವದತ್ ಪಡಿಕ್ಕಲ್ ಕಳೆದ ವರ್ಷವೇ ಆರ್ಸಿಬಿಯಲ್ಲಿ ಅವಕಾಶ ಪಡೆದಿದ್ದರೂ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ, 2019ರ ದೇಶಿ ಋತುವಿನಲ್ಲಿ ರನ್ಗಳ ಹೊಳೆಯನ್ನೇ ಹರಿಸಿದ ಯುವ ಕ್ರಿಕೆಟಿಗ 13ನೇ ಆವೃತ್ತಿಯಲ್ಲಿ ಕೊಹ್ಲಿ, ಎಬಿಡಿಗೆ ಸರಿ ಸಮಾನವಾಗಿ ರನ್ಗಳಿಸುತ್ತಿದ್ದಾರೆ. ಅವರು ಈಗಾಗಲೆ 10 ಪಂದ್ಯಗಳಲ್ಲಿ 3 ಅರ್ಧಶತಕ ಸಹಿತ 321 ರನ್ಗಳಿಸುವ ಮೂಲಕ 20 ವರ್ಷದ ಆಟಗಾರ ತಮ್ಮ ಪದಾರ್ಪಣೆ ಆವೃತ್ತಿಯನ್ನ ಸ್ಮರಣೀಯವನ್ನಾಗಿಸಿಕೊಳ್ಳುತ್ತಿದ್ದಾರೆ.
ರಾಹುಲ್ ತೆವಾಟಿಯಾ
ಐಪಿಎಲ್ನಲ್ಲಿ ದಿಢೀರ್ ಪ್ರಸಿದ್ಧಿಯಾದ ಆಟಗಾರ ಎಂದರೆ ರಾಜಸ್ಥಾನ್ ರಾಯಲ್ಸ್ ತಂಡದ ರಾಹುಲ್ ತೆವಾಟಿಯಾ. ಈ ಹಿಂದಿನ 3 ಆವೃತ್ತಿಗಳಲ್ಲಿ ಆಡಿದ್ದರೂ ಸಹ ಅವರ ಹೆಸರು ಯಾರಿಗೂ ತಿಳಿದಿರಲಿಲ್ಲ. ಆದರೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಶೆಲ್ಡಾನ್ ಕಾಟ್ರೆಲ್ಗೆ ಒಂದೇ ಓವರ್ನಲ್ಲಿ 5 ಸಿಕ್ಸರ್ ಸಿಡಿಸಿದ ನಂತರ ಅವರ ಹೆಸರು ಕ್ರಿಕೆಟ್ ಜಗತ್ತಿನಲ್ಲಿ ರಾತ್ರೋ ರಾತ್ರಿ ಸ್ಟಾರ್ ಆದರು. ಜೊತೆಗೆ 223 ರನ್ಗಳನ್ನ ಬೆನ್ನಟ್ಟಿ ದಾಖಲೆಯ ಜಯ ಸಾಧಿಸಲು ನೆರವಾಗಿದ್ದರು. ಈ ತೆವಾಟಿಯಾ ಕೂಡ ರಾಜಸ್ಥಾನ್ ತಂಡದ ಮೌಲ್ಯಯುತ ಆಟಗಾರನಾಗಿ ತಮ್ಮ ಆಲ್ರೌಂಡರ್ ಪ್ರದರ್ಶನವನ್ನು ಎಲ್ಲಾ ಪಂದ್ಯಗಳಲ್ಲೂ ತೋರುತ್ತಾ ಬಂದಿದ್ದಾರೆ.
ಟಿ.ನಟರಾಜನ್
ತಮಿಳುನಾಡಿನ ಸಣ್ಣ ಹಳ್ಳಿಯ 29 ವರ್ಷದ ಟಿ ನಟರಾಜನ್ ಈ ಋತುವಿನಲ್ಲಿ ಸನ್ರೈಸರ್ಸ್ನ ಟಾಪ್ ಬೌಲರ್ ಆಗಿದ್ದಾರೆ. ಭುವನೇಶ್ವರ್ ಕುಮಾರ್ ಅವರ ಗೈರು ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಅವರು 8.46 ಎಕಾನಮಿಯಲ್ಲಿ ಟೂರ್ನಿಯಲ್ಲಿ 11 ವಿಕೆಟ್ ಪಡೆದಿದ್ದಾರೆ. ವಿಶೇಷವೆಂದರೆ ನಟರಾಜನ್ ಈ ಋತುವಿನಲ್ಲಿ ಅತಿ ಹೆಚ್ಚು ಯಾರ್ಕರ್ ಮಾಡಿರುವ ಬೌಲರ್ ಆಗಿದ್ದು, ಆರ್ಚರ್, ಬುಮ್ರಾ ಅವರನ್ನೇ ಹಿಂದಿಕ್ಕಿದ್ದಾರೆ.
ಕಾರ್ತಿಕ್ ತ್ಯಾಗಿ
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿರುವ ಕಾರ್ತಿಕ್ ತ್ಯಾಗಿ ಕೂಡ ಈ ಬಾರಿ ಐಪಿಎಲ್ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ತ್ಯಾಗಿ ಅಂಡರ್ 19 ಪ್ರತಿಭೆಯಾಗಿದ್ದು, 2020ರ ವಿಶ್ವಕಪ್ನಲ್ಲಿ 11 ವಿಕೆಟ್ ಪಡೆದು ಮಿಂಚಿದ್ದರು. ಈಗಾಗಲೆ ತಮ್ಮ ಪ್ರತಿಭೆಯಿಂದ ಬ್ರೆಟ್ ಲೀ, ಇಶಾಂತ್ ಶರ್ಮಾರೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಅದರಲ್ಲೂ ವಿಂಡೀಸ್ ಲೆಜೆಂಡ್ ಇಯಾನ್ ಬಿಷಪ್ ಯುವ ಪೇಸರ್ನ ಬೌಲಿಂಗ್ ಕೌಶಲ್ಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.