ದುಬೈ:ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಅನೇಕ ವಿವಾದಗಳಿಗೆ ಕಾರಣವಾಗಿದ್ದು, ನ್ಯೂಜಿಲ್ಯಾಂಡ್ - ಇಂಗ್ಲೆಂಡ್ ನಡುವೆ ನಡೆದ ಪಂದ್ಯದಲ್ಲಿ ಕಳಪೆ ಅಂಪೈರಿಂಗ್ ವಿರುದ್ಧ ಈಗಾಗಲೇ ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಾದಕ್ಕೆ ಸಂಬಂಧಿಸಿದಂತೆ ಇಷ್ಟು ದಿನ ಸುಮ್ಮನಾಗಿದ್ದ ಐಸಿಸಿ ಇದೀಗ ಮೌನ ಮುರಿದಿದೆ. ಉಭಯ ತಂಡಗಳ ನಡುವೆ ನಡೆದ ಪಂದ್ಯದ ಕೊನೆ ಓವರ್ನಲ್ಲಿ ಇಂಗ್ಲೆಂಡ್ಗೆ 9ರನ್ಗಳ ಅವಶ್ಯವಿತ್ತು. ಈ ವೇಳೆ ಸ್ಟೋಕ್ಸ್ ಹೊಡೆದ ಚೆಂಡು ಡೀಪ್ ಮಿಡ್ ವಿಕೆಟ್ನತ್ತ ಸಾಗಿತ್ತು. ಈ ವೇಳೆ ಫೀಲ್ಡಿಂಗ್ನಲ್ಲಿದ್ದ ಮಾರ್ಟಿನ್ ಗಪ್ಟಿಲ್ ಎಸೆದ ಚೆಂಡು ಸ್ಟೋಕ್ಸ್ ಬ್ಯಾಟ್ಗೆ ತಾಗಿ ಬೌಂಡರಿ ಗೆರೆ ದಾಟಿತ್ತು. ಈ ವೇಳೆ ಅಂಪೈರ್ 6ರನ್ ನೀಡಿದ್ದರು. ಇದು ಅನೇಕ ಚರ್ಚೆಗಳಿಗೆ ಕಾರಣವಾಗಿತ್ತು.
ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಐಸಿಸಿ, ಮೈದಾನದಲ್ಲಿದ್ದ ಅಂಪೈರ್ಗಳು ತೆಗೆದುಕೊಳ್ಳುವ ಕೆಲವೊಂದು ನಿರ್ಧಾರಗಳು ಅವರ ವಿವೇಚನೆಗೆ ಬಿಟ್ಟಿರುತ್ತವೆ. ಅವು ಐಸಿಸಿ ನಿಯಮಕ್ಕೆ ವಿರುದ್ಧವಾಗಿದ್ದರೂ ನಾವು ಏನು ಮಾಡಲು ಆಗುವುದಿಲ್ಲ. ಕೆಲವೊಮ್ಮೆ ಇಂತಹ ಪ್ರಮಾದಗಳು ನಡೆಯುತ್ತವೆ ಎಂದು ಐಸಿಸಿ ವಕ್ತಾರ ತಿಳಿಸಿದ್ದಾರೆ.
ಮಾರ್ಟಿನ್ ಗಪ್ಟಿಲ್ ಮಾಡಿದ ಥ್ರೋವೊಂದು ಸ್ಟೋಕ್ಸ್ ಬ್ಯಾಟ್ ತಾಗಿ ಬೌಂಡರಿಗೆ ಹೋದಾಗ ಅಂಪೈರ್ ಧರ್ಮಸೇನಾ ಇಂಗ್ಲೆಂಡ್ಗೆ ಆರು ರನ್ ನೀಡಿದ್ದು, ಎಲ್ಲಡೆ ಚರ್ಚೆಗೆ ಒಳಗಾಗಿತ್ತು. ಐಸಿಸಿ ವಿರುದ್ಧ ಆಕ್ರೋಶ ಸಹ ವ್ಯಕ್ತವಾಗಿತ್ತು.
ಏನಿದು ವಿವಾದ
ಐಸಿಸಿ ನಿಯಮದ ಪ್ರಕಾರ ಫೀಲ್ಡರ್ ಥ್ರೋ ಮಾಡುವ ಮೊದಲು ಇಬ್ಬರು ಬ್ಯಾಟ್ಸ್ಮನ್ಗಳು ಪರಸ್ಪರ ಒಬ್ಬರನ್ನೊಬ್ಬರು ದಾಟಿರಬೇಕು. ಆಗ ಮಾತ್ರ ಎರಡನೇ ರನ್ ಮಾನ್ಯವಾಗುತ್ತದೆ. ಆದರೆ, ಈ ಘಟನೆಯಲ್ಲಿ ಹೀಗಾಗಿರಿಲ್ಲ. ಹಾಗಾಗಿ ಐದು ರನ್ ಮಾತ್ರ ನೀಡಬೇಕಿತ್ತು. ಮತ್ತು ಮುಂದಿನ ಎಸೆತವನ್ನು ಸ್ಟೋಕ್ಸ್ ಬದಲಾಗಿ ಆದಿಲ್ ರಶೀದ್ ಆಡಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.