ಕೇಪ್ಟೌನ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಟಗಾರ ಫಾಫ್ ಡು ಪ್ಲೆಸಿಸ್ ಟೆಸ್ಟ್ ಮತ್ತು ಟಿ-20 ನಾಯಕತ್ವ ಸ್ಥಾನದಿಂದ ಹಿಂದೆ ಸರಿದ್ದಾರೆ.
ಈ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದೆ. ನಾನು ನಾಯಕತ್ವ ಜವಾಬ್ದಾರಿಯನ್ನ ವಹಿಸಿಕೊಂಡ ನಂತರ ತುಂಬಾ ಬದ್ಧತೆಯಿಂದ ಅದನ್ನ ನಿರ್ವಹಿಸಿದ್ದೇನೆ. ಯುವ ಆಟಗಾರರೊಂದಿದೆ ಹೊಸ ದಿಕ್ಕಿನೆಡೆಗೆ ತಂಡವನ್ನ ಮುನ್ನಡೆಸಿದ್ದು, ಮುಂದೆಯೂ ಇದು ಮುಂದುವರೆಯುತ್ತದೆ ಎಂದು ಭಾವಿಸುತ್ತೇನೆ ಎಂದು ಪ್ಲೆಸಿಸ್ ಹೇಳಿದ್ದಾರೆ.
ಮೈದಾನದ ಹೊರಗಿನ ಸಮಸ್ಯೆಗಳಿಗೆ ಹೆಚ್ಚು ಸಮಯ ಮತ್ತು ಶಕ್ತಿ ನೀಡಿದ್ದರಿಂದ ನನ್ನ ನಾಯಕತ್ವದ ಕೊನೆಯ ಆವೃತ್ತಿ, ಅತ್ಯಂತ ಸವಾಲಿನಿಂದ ಕೂಡಿತ್ತು. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಹಿತದೃಷ್ಟಿಯಿಂದ ನಾಯಕತ್ವ ಸ್ಥಾನ ತ್ಯಜಿಸುವುದು ಉತ್ತಮ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ಹೊಸ ಯುಗವನ್ನು ಪ್ರವೇಶಿಸಿದೆ. ಹೊಸ ನಾಯಕತ್ವ, ಹೊಸ ಮುಖಗಳು, ಹೊಸ ಸವಾಲುಗಳು ಮತ್ತು ಹೊಸ ತಂತ್ರಗಳು. ನಾನು ಈಗ ಆಟಗಾರನಾಗಿ ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಲು ಬದ್ಧನಾಗಿರುತ್ತೇನೆ ಮತ್ತು ತಂಡದ ಹೊಸ ನಾಯಕರಿಗೆ ನನ್ನ ಜ್ಞಾನ ಮತ್ತು ಸಮಯವನ್ನು ನೀಡುತ್ತೇನೆ ಎಂದಿದ್ದಾರೆ.