ಹೈದರಾಬಾದ್ :ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ತಂಡ ಸೇರಿಕೊಳ್ಳುತ್ತಿದ್ದಂತೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ತನ್ನ ಅಗ್ರ ಕ್ರಮಾಂಕದ ವೈಫಲ್ಯವನ್ನು ಸರಿಪಡಿಸಿಕೊಂಡಿದೆ. ಪೂಜಾರ ಅತ್ಯುತ್ತಮ ಫಾರ್ಮ್ನಲ್ಲಿರುವುದರಿಂದ ಭಾರತ ತಂಡ ಅಗ್ರ ಕ್ರಮಾಂಕ ಪ್ರವಾಸಿ ಇಂಗ್ಲೆಂಡ್ ತಂಡಕ್ಕಿಂತ ಭಾರಿ ಮುಂದಿದೆ.
ಇತ್ತೀಚೆಗೆ ಮುಗಿದ ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಆರಂಭಿಕರಾದ ಜ್ಯಾಕ್ ಕ್ರಾಲೆ ಮತ್ತು ಡೊಮೆನಿಕ್ ಸಿಬ್ಲೇ ಭಾರಿ ವೈಫಲ್ಯ ಅನುಭವಿಸಿದ್ದರು. ಸಿಬ್ಲೇ ನಾಲ್ಕು ಇನ್ನಿಂಗ್ಸ್ಗಳಲ್ಲಿ ಕೇವಲ ಒಂದು ಅರ್ಧಶತಕ ಸಿಡಿಸಿದರೆ, ಕ್ರಾಲೇ ಒಂದನ್ನೂ ಗಳಿಸಲಾಗಲಿಲ್ಲ. ಅಲ್ಲದೆ ಶ್ರೀಲಂಕಾ ವಿರುದ್ಧದ ಇತ್ತೀಚಿನ ಟೆಸ್ಟ್ ಸರಣಿಯಲ್ಲಿ ನಂ.3ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಜಾನಿ ಬೈರ್‌ಸ್ಟೋವ್ ಅವರನ್ನು ತವರಿಗೆ ಕಳುಹಿಸಿದ ನಂತರ ಇಂಗ್ಲೆಂಡ್‌ನ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಿವೆ.
ಈ ರೀತಿ ಆಟಗಾರರನ್ನು ಸರಣಿಗಳಿಗೆ ಬದಲಾವಣೆ ಮಾಡುತ್ತಿರುವುದಕ್ಕೆ ಈಗಾಗಲೇ ಇಂಗ್ಲೆಂಡ್ ಮಾಜಿ ನಾಯಕರಾದ ಮೈಕಲ್ ವಾನ್, ನಾಸಿರ್ ಹುಸೇನ್ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ವಿರುದ್ಧ ಕಿಡಿ ಕಾರಿದ್ದರು.
"ಬೆನ್ ಸ್ಟೋಕ್ಸ್, ಬೈರ್ಸ್ಟೋವ್ ಮತ್ತು ಜೋ ರೂಟ್ ಮೂವರು ಇಂಗ್ಲೆಂಡ್ ತಂಡದಲ್ಲಿ ಸ್ಪಿನ್ ಬೌಲಿಂಗ್ಗೆ ಆಡುವುದರಲ್ಲಿ ಉತ್ತಮ ಬ್ಯಾಟ್ಸ್ಮನ್ಗಳು. ಇದೀಗ ಒಬ್ಬರಿಗೆ ಇಂಗ್ಲೆಂಡ್ಗೆ ತೆರಳು ಬೋರ್ಡಿಂಗ್ ಪಾಸ್ ನೀಡಿ, ಮತ್ತಿಬ್ಬರನ್ನು ಚೆನ್ನೈಗೆ ಕಳುಹಿಸಿರುವುದನ್ನ ಪುನರ್ವಿಮರ್ಶೆ ಮಾಡಬೇಕಿದೆ" ಎಂದು ಹುಸೇನ್ ಬುಧವಾರ ತಿಳಿಸಿದ್ದಾರೆ.