ಮ್ಯಾಂಚೆಸ್ಟರ್: ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ 3ನೇ ಟೆಸ್ಟ್ ಪಂದ್ಯ ನಾಳೆಯಿಂದ ಮ್ಯಾಂಚೆಸ್ಟರ್ನ ಎಮಿರೇಟ್ಸ್ ಓಲ್ಡ್ ಟ್ರಾಫೋರ್ಡ್ನಲ್ಲಿ ನಡೆಯಲಿದೆ. ಎರಡೂ ತಂಡಗಳಿಗೂ ಸರಣಿ ಗೆಲ್ಲಲು ಈ ಪಂದ್ಯ ನಿರ್ಣಾಯಕವಾಗಿದೆ.
ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ನೆಲದಲ್ಲಿ 1988ರಲ್ಲಿ ಕೊನೆಯ ಬಾರಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿದೆ. ಅಲ್ಲಿಂದೀಚೆಗೆ ಆಂಗ್ಲರ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲಲಾಗದ ವಿಂಡೀಸ್ ಟೀಂಗೆ ಈ ಬಾರಿ ಅದ್ಭುತ ಅವಕಾಶ ದೊರೆತಿದೆ. ಮೊದಲ ಟೆಸ್ಟ್ನಲ್ಲಿ ಗೆದ್ದಿದ್ದ ಹೋಲ್ಡರ್ ಪಡೆ ಎರಡನೇ ಟೆಸ್ಟ್ನಲ್ಲಿ ಡ್ರಾ ಸಾಧಿಸಬಹುದಾದ ಪಂದ್ಯದಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ 114 ರನ್ಗಳ ಸೋಲುಕಂಡಿತ್ತು.
ಇಂಗ್ಲೆಂಡ್ ತಂಡಕ್ಕೆ ಸ್ಟೋಕ್ಸ್ ಆಲ್ರೌಂಡರ್ ಆಟದ ಬಲದ ಜೊತೆಗೆ ಅಂತಿಮ ಟೆಸ್ಟ್ನಲ್ಲಿ ಜೋಫ್ರಾ ಆರ್ಚರ್ ತಂಡ ಸೇರಿಕೊಳ್ಳುತ್ತಿರುವುದು ತಂಡದ ಬಲ ಹೆಚ್ಚಿಸಿದೆ.
ವಿಂಡೀಸ್ ತಂಡದಲ್ಲಿ ಕ್ರೈಗ್ ಬ್ರಾಥ್ವೇಟ್, ಬ್ಲಾಕ್ವುಡ್ ಹಾಗೂ ಬ್ರೂಕ್ಸ್ ಅಮೋಘ ಫಾರ್ಮ್ನಲ್ಲಿದ್ದಾರೆ. ಆದರೆ ಆರಂಭಿಕ ಬ್ಯಾಟ್ಸ್ಮನ್ ಕ್ಯಾಂಪ್‌ಬೆಲ್ ಹಾಗೂ ಅನುಭವಿ ಶಾಯ್ ಹೋಪ್ ಮಾತ್ರ ವಿಫಲವಾಗುತ್ತಿದ್ದಾರೆ. ಮೂರನೇ ಪಂದ್ಯದಲ್ಲಿ ವಿಂಡೀಸ್ ತಂಡ ಗೆಲ್ಲಬೇಕೆಂದರೆ ಇವರಿಬ್ಬರ ಪಾತ್ರ ಮಹತ್ವದ್ದಾಗಿದೆ.