ಲಂಡನ್ :ಪ್ರಸ್ತುತ ಕ್ರಿಕೆಟ್ನಲ್ಲಿ ಅತ್ಯುತ್ತಮ ಆರಂಭಿಕ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿರುವ ಇಂಗ್ಲೆಂಡ್ನ ಜೇಸನ್ ರಾಯ್ ತಮ್ಮ ನೆಚ್ಚಿನ ಆರಂಭಿಕ ಬ್ಯಾಟ್ಸ್ಮನ್ ಆಗಿ ಭಾರತ ತಂಡದ ರೋಹಿತ್ ಶರ್ಮಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಖಾಸಗಿ ಕ್ರೀಡಾವೆಬ್ಸೈಟ್ ಜೊತೆ ಮಾತನಾಡುವಾಗ ಡೇವಿಡ್ ವಾರ್ನರ್ ಹಾಗೂ ರೋಹಿತ್ ಶರ್ಮಾ ಇಬ್ಬರಲ್ಲಿ ಯಾರು ನಿಮ್ಮ ಮೆಚ್ಚಿನ ಆರಂಭಿಕ ಬ್ಯಾಟ್ಸ್ಮನ್ ಎಂದು ರಾಯ್ರನ್ನು ಪ್ರಶ್ನಿಸಿದ್ದಕೆ, ಇಂಗ್ಲೆಂಡ್ ಓಪನರ್ ‘ಹಿಟ್ಮ್ಯಾನ್‘ ಹೆಸರನ್ನು ಸೂಚಿಸಿದ್ದಾರೆ. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ 3 ದ್ವಿಶತಕ, ಟಿ20 ಕ್ರಿಕೆಟ್ನಲ್ಲಿ ನಾಲ್ಕು ಶತಕ ಸಿಡಿಸಿರುವ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.
ಅಲ್ಲದೆ ಕಳೆದ ವರ್ಷ ಟೆಸ್ಟ್ ಕ್ರಿಕೆಟ್ನಲ್ಲೂ ಆರಂಭಿಕನಾಗಿ ಕಣಕ್ಕಿಳಿದು ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಮೂರು ಮಾದರಿಯಲ್ಲೂ ತಾವೊಬ್ಬ ಶ್ರೇಷ್ಠ ಓಪನರ್ ಎಂದು ಸಾಬೀತುಪಡಿಸಿದ್ದಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ವೇಳೆ 5 ಶತಕದ ಸಹಿತ 647 ರನ್ಗಳಿಸಿ ದಾಖಲೆ ಬರೆದಿದ್ದರು. ಅಲ್ಲದೆ 2019ರ ಋತುವಿನಲ್ಲಿ ಬರೋಬ್ಬರಿ 1490 ರನ್ಗಳಿಸುವ ಮೂಲಕ ಆವೃತ್ತಿಯ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.
ಇದೇ ಸಂದರ್ಭದಲ್ಲಿ ವಿಶ್ವಪ್ರಸಿದ್ಧ ಟಿ20 ಲೀಗ್ಗಳಾದ ಐಪಿಎಲ್, ಬಿಬಿಎಲ್ ಹಾಗೂ ಪಿಎಸ್ಎಲ್ಗಳನ್ನು ಆಡಿದ್ದೀರಾ.. ನಿಮ್ಮ ನೆಚ್ಚಿನ ಲೀಗ್ ಯಾವುದು ಎಂದು ಕೇಳಿದ್ದಕ್ಕೆ ರಾಯ್ ಇಂಡಿಯನ್ ಪ್ರೀಮಿಯರ್ ಲೀಗ್ ಎಂದು ಹೇಳಿದ್ದಾರೆ. ಪಿಎಸ್ಎಲ್ನಲ್ಲಿ ಒಮ್ಮೆ ಮಾತ್ರ ಆಡಿದ್ದೇನೆ. ಆದರೆ, ಭಾರತದಲ್ಲಿ 3-4 ಸಲ ಆಡಿದ್ದೇನೆ. ಬಿಬಿಎಲ್ ವಿಭಿನ್ನವಾಗಿದೆ.
ಕ್ರಿಕೆಟ್ ಅನುಭವದ ಪ್ರಕಾರ ಹೋಗುವುದಾದ್ರೆ ನಾನು ಐಪಿಎಲ್ ಆಯ್ಕೆ ಮಾಡುತ್ತೇನೆ ಎಂದಿದ್ದಾರೆ. ಇನ್ನು ಕೊಹ್ಲಿ, ವಿಲಿಯಮ್ಸನ್, ರೂಟ್ ಹಾಗೂ ಸ್ಟೀವ್ ಸ್ಮಿತ್ ಇವರಲ್ಲಿ ಯಾರು ಅತ್ಯುತ್ತಮ ಬ್ಯಾಟ್ಸ್ಮನ್ ಎಂಬ ಪ್ರಶ್ನೆಗೆ ‘ರೂಟ್‘ಎಂದು ಹೇಳಿದ್ದಾರೆ.