ಕರ್ನಾಟಕ

karnataka

ETV Bharat / sports

ಭರ್ಜರಿ ಗೆಲುವಿನೊಂದಿಗೆ ಸೆಮೀಸ್​ಗೆ ಆಂಗ್ಲರ ಪಡೆ ಲಗ್ಗೆ... ಸೋತ ನ್ಯೂಜಿಲ್ಯಾಂಡ್​​​ ಸಹ ಸೆಮಿಫೈನಲ್​ಗೆ! - ಗೆಲುವು

ವಿಶ್ವಕಪ್​​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲು ಮಾಡಿರುವ ಇಂಗ್ಲೆಂಡ್​​ ಪಡೆ ಸೆಮಿಫೈನಲ್​​ಗೆ​ ಲಗ್ಗೆ ಹಾಕಿದೆ.

ಇಂಗ್ಲೆಂಡ್​ ತಂಡ

By

Published : Jul 3, 2019, 11:19 PM IST

Updated : Jul 3, 2019, 11:24 PM IST

ಚಸ್ಟರ್​ ಲೆ ಸ್ಟ್ರೀಟ್​:ಸೆಮಿಫೈನಲ್​ ತಲುಪಲು ಮಾಡು ಇಲ್ಲವೇ ಮಡಿ ಮಹತ್ವ ಪಡೆದುಕೊಂಡಿದ್ದ ಪಂದ್ಯದಲ್ಲಿ ಭರ್ಜರಿ 119 ರನ್​ಗಳ ಗೆಲುವು ದಾಖಲು ಮಾಡುವ ಮೂಲಕ ಇಂಗ್ಲೆಂಡ್​ ಸೆಮಿಫೈನಲ್​ ಪ್ರವೇಶ ಪಡೆದುಕೊಂಡಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಇಂಗ್ಲೆಂಡ್​ ತಂಡ ಬೈರ್‌ಸ್ಟೋವ್ ಶತಕ (106) ಹಾಗೂ ಜೇಸನ್ ರಾಯ್ ಅರ್ಧಶತಕದ (60) ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 305 ರನ್‌ ಪೇರಿಸಿತ್ತು.

ಇದರ ಬೆನ್ನತ್ತಿದ್ದ ನ್ಯೂಜಿಲ್ಯಾಂಡ್​ ತಂಡ ಆರಂಭದಲ್ಲೇ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. ಆರಂಭಿಕರಾದ ಗುಪ್ಟಿಲ್​​(8ರನ್​), ಹನ್ರಿ(0) ನಿರಾಸೆ ಮೂಡಿಸಿದರು. ನಾಯಕ ವಿಲಿಯಮ್ಸನ್​(27) ಹಾಗೂ ಟೇಲರ್​​(28) ರನ್ ​ಗಳಿಸಿದ್ದ ವೇಳೆ ರನೌಟ್​ ಬಲೆಗೆ ಬಿದ್ದರು. ಹೀಗಾಗಿ ತಂಡ 69 ರನ್​ ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 4 ವಿಕೆಟ್​ ಕಳೆದುಕೊಂಡು ನಿರಾಸೆಗೊಳಗಾಯಿತು.

ಇದಾದ ಬಳಿಕ ಒಂದಾದ ಲ್ಯಾಥಮ್​ ಹಾಗೂ ನೀಶಮ್​ ತಂಡವನ್ನ ಎಚ್ಚರಿಕೆಯಿಂದ ಮುನ್ನಡೆಸುವ ಯತ್ನ ಮಾಡಿದರು. ಆದರೆ 19 ರನ್ ​ಗಳಿಕೆ ಮಾಡಿದ್ದ ನಿಶನ್​ ಬೌಲ್ಡ್​ ಆದರು. ಇದರ ಬೆನ್ನಲ್ಲೇ ಗ್ರ್ಯಾಂಡ್​ಹೋಮ್​(3) ರನ್ ​ಗಳಿಸಿ ಪೆವಿಲಿಯನ್​ ಸೇರಿಕೊಂಡರು. ಆದರೆ ಲ್ಯಾಥಮ್​ (57ರನ್​​) ಸಮಯೋಚಿತ ಅರ್ಧಶತಕ ಸಿಡಿಸಿದರು.

ಉಳಿದಂತೆ ಸ್ಯಾಂಟ್ನರ್​​(12), ಸೌಥಿ(7), ಹೆನ್ರಿ(7) ಹಾಗೂ ಬೌಲ್ಟ್​(4) ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ತಂಡ ಕೊನೆಯದಾಗಿ 45 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 186 ರನ್​ಗಳಿಗೆ ಆಲೌಟ್​ ಆಗಿ 119 ರನ್​ಗಳ ಸೋಲು ಕಂಡಿತು.

ಇಂಗ್ಲೆಂಡ್​ ಪರ ಮಾರ್ಕ್​ ವುಡ್​ 3 ವಿಕೆಟ್​ ಪಡೆದುಕೊಂಡರೆ, ವೋಕ್ಸ್​, ಆರ್ಚರ್​, ಪ್ಲಂಕೆಟ್, ಆದಿಲ್​ ರಾಶೀದ್​ ಹಾಗೂ ಸ್ಟೋಕ್ಸ್​ ತಲಾ 1ವಿಕೆಟ್​ ಪಡೆದುಕೊಂಡರು.

ಕಿವೀಸ್​ ಸೆಮಿಫೈನಲ್​ ಲಗ್ಗೆ ಬಹುತೇಕ ಖಚಿತ!
9 ಪಂದ್ಯಗಳ ಪೈಕಿ 6ರಲ್ಲಿ ಗೆದ್ದು ಇಂಗ್ಲೆಂಡ್​ 12 ಅಂಕಗಳೊಂದಿಗೆ ಮೂರನೇ ಸ್ಥಾನದೊಂದಿಗೆ ಸೆಮಿಫೈನಲ್​ ಪ್ರವೇಶ ಪಡೆದುಕೊಂಡಿದೆ. ಇದರ ಮಧ್ಯೆ ಇಷ್ಟೇ ಪಂದ್ಯಗಳನ್ನಾಡಿರುವ ನ್ಯೂಜಿಲ್ಯಾಂಡ್​ 5ರಲ್ಲಿ ಗೆದ್ದು 11 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಇವತ್ತಿನ ಸೋಲಿನ ನಡುವೆ ಕೂಡ ಕಿವೀಸ್​ ಸೆಮಿಫೈನಲ್​ ಪ್ರವೇಶ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಲೀಗ್​ನಲ್ಲಿ ಕೊನೆಯದಾಗಿ ಬಾಂಗ್ಲಾ ವಿರುದ್ಧ ಪೈಟ್​ ನಡೆಸಲಿರುವ ಪಾಕಿಸ್ತಾನ 300+ರನ್​ಗಳ ಅಂತರದಿಂದ ಗೆಲುವು ದಾಖಲು ಮಾಡಬೇಕಾಗಿದೆ. ಅವಾಗ ಮಾತ್ರ ಪಾಕ್​ ಸೆಮಿಫೈನಲ್​ ಪ್ರವೇಶ ಪಡೆದುಕೊಳ್ಳಲಿದೆ.

27 ವರ್ಷಗಳ ಬಳಿಕ ಇಂಗ್ಲೆಂಡ್​ ಸೆಮಿಫೈನಲ್​ಗೆ!

1992ರ ನಂತರ ಇದೇ ಮೊದಲ ಬಾರಿಗೆ ಇಂಗ್ಲೆಂಡ್​ ವಿಶ್ವಕಪ್​ನಲ್ಲಿ ಸೆಮಿಫೈನಲ್​ ಪ್ರವೇಶ ಪಡೆದುಕೊಂಡಿದ್ದು, ಬರೋಬ್ಬರಿ 27 ವರ್ಷಗಳ ಬಳಿಕ ಈ ಸಾಧನೆ ಮಾಡಿರುವ ತಂಡವಾಗಿ ಹೊರಹೊಮ್ಮಿದೆ.

Last Updated : Jul 3, 2019, 11:24 PM IST

ABOUT THE AUTHOR

...view details