ಮ್ಯಾಂಚೆಸ್ಟರ್: ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಮತ್ತು ನಿರ್ಣಾಯಕ ಟೆಸ್ಟ್ ಪಂದ್ಯವು ಓಲ್ಡ್ ಟ್ರಾಫರ್ಡ್‌ನಲ್ಲಿ ಇಂದು ಆರಂಭವಾಗಲಿದೆ. ಮೊದಲ ಪಂದ್ಯವನ್ನು ವಿಂಡೀಸ್ ಗೆದ್ದುಕೊಂಡಿತ್ತು. ನಂತರ ಇಂಗ್ಲೆಂಡ್ ಎರಡನೇ ಟೆಸ್ಟ್ ಗೆದ್ದು ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.
ಇಲ್ಲಿಯವರೆಗೆ, ಈ ಸರಣಿಯಲ್ಲಿ ಉಭಯ ತಂಡಗಳು ಉತ್ತಮ ಪ್ರದರ್ಶನ ನೀಡಿದ್ದು, ಮೂರನೇ ಟೆಸ್ಟ್ನ ಗೆಲುವಿಗಾಗಿ ಎರಡು ತಂಡಗಳು ಪ್ರಬಲ ಪೈಪೋಟಿ ನಡೆಸಲು ತಯಾರಾಗಿವೆ.
ಪಂದ್ಯದಲ್ಲಿ, ಎಲ್ಲರ ಕಣ್ಣುಗಳು ಉಭಯ ತಂಡಗಳ ವೇಗದ ಬೌಲಿಂಗ್ ದಾಳಿಯತ್ತ ಇದೆ. ಈ ಪಂದ್ಯದಲ್ಲಿ ತಮ್ಮ ಪ್ರಬಲ ದಾಳಿಯನ್ನು ಪ್ರಾರಂಭಿಸುವುದಾಗಿ ಇಂಗ್ಲೆಂಡ್ ತಂಡದ ಕೋಚ್ ಕ್ರಿಸ್ ಸಿಲ್ವರ್‌ವುಡ್ ಈಗಾಗಲೇ ಹೇಳಿದ್ದಾರೆ. ಆಂಗ್ಲ ವೇಗಿಗಳಾದ ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್ ಮತ್ತು ಜೋಫ್ರಾ ಆರ್ಚರ್ ಮೂವರು ಒಟ್ಟಿಗೆ ಕಾಣುವ ಸಾಧ್ಯತೆಯಿದೆ.
ಇಲ್ಲಿಯವರೆಗೆ, ಬ್ರಾಡ್ ಮತ್ತು ಆಂಡರ್ಸನ್ ಈ ಸರಣಿಯಲ್ಲಿ ಒಟ್ಟಿಗೆ ಆಡಿಲ್ಲ. ಸರಣಿಯ ನಿರ್ಣಾಯಕ ಪಂದ್ಯವಾಗಿದ್ದರಿಂದ, ಇಬ್ಬರು ಕಣಕ್ಕಿಳಿಯುವ ಸಾಧ್ಯತೆಯಿದೆ. ಹಾಗೆಯೇ ಆರ್ಚರ್ ಕೂಡ ತಂಡ ಸೇರಲು ಸಿದ್ಧವಾಗಿದ್ದಾರೆ.
ವೆಸ್ಟ್ ಇಂಡೀಸ್ನ ಬೌಲಿಂಗ್ ವಿಭಾಗದಲ್ಲಿ ಶಾನನ್ ಗೇಬ್ರಿಯಲ್ ಮತ್ತು ಅಲ್ಜಾರಿ ಜೋಸೆಫ್ ಕೂಡ ಮೂರನೇ ಪಂದ್ಯದಲ್ಲಿ ಎದುರಾಳಿ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಲು ತಯಾರಿ ನಡೆಸಿದ್ದು, ಇವರಿಗೆ ತಂಡದ ನಾಯಕ ಜೇಸನ್ ಹೋಲ್ಡರ್ ಸಾಥ್ ನೀಡಲಿದ್ದಾರೆ.
ವಿಂಡಿಸ್ ತಂಡಕ್ಕೆ ಎರಡು ಪಂದ್ಯಗಳಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ದುಃಸ್ವಪ್ನವಾಗಿ ಕಾಡಿದ್ದ ಬೆನ್ ಸ್ಟೋಕ್ಸ್, ಉತ್ತಮ ಫಾರ್ಮನಲ್ಲಿದ್ದು ಇವರನ್ನ ಕಟ್ಟಿಹಾಕಲು ತಂಡ ಪೂರ್ವ ತಯಾರಿ ಮಾಡಿಕೊಂಡಿದೆ. ಎರಡನೇ ಪಂದ್ಯದಲ್ಲಿ ಅತ್ಯುತ್ತಮ ಆಲ್ರೌಂಡ್ ಆಟದೊಂದಿಗೆ ಸ್ಟೋಕ್ಸ್ ಸರಣಿ ಸಮಬಲ ಸಾಧಿಸಲು ಪ್ರಮುಖ ಪಾತ್ರವಹಿಸಿದ್ದರು.
ಬ್ಯಾಟಿಂಗ್‌ನಲ್ಲಿ, ಇಂಗ್ಲೆಂಡ್ ಸ್ಟೋಕ್ಸ್ ಹೊರತುಪಡಿಸಿ, ನಾಯಕ ಜೋ ರೂಟ್ ಅವರ ಮೇಲೆ ಅವಲಂಬಿತರಾಗಿದ್ದಾರೆ. ಡೊಮ್ ಸಿಬ್ಲಿ ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಅವರು ತಮ್ಮ ಫಾರ್ಮ್ ಅನ್ನು ಮುಂದುವರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಜೋಸ್ ಬಟ್ಲರ್ ಅವರಿಂದ ತಂಡವು ಉತ್ತಮ ನಿರೀಕ್ಷೆ ಹೊಂದಿದೆ.
ವಿಂಡೀಸ್ ತಂಡದಲ್ಲಿ ಜರ್ಮೈನ್ ಬ್ಲ್ಯಾಕ್ ವುಡ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಅವರು ಮೊದಲ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹಾಗೆಯೇ ಎರಡನೇ ಪಂದ್ಯದಲ್ಲೂ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದರು. ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಶೈ ಹೋಪ್ ಎರಡು ಪಂದ್ಯಗಳಲ್ಲಿ ಪ್ಲಾಪ್ ಆಗಿದ್ದು, ಈ ಪಂದ್ಯದಲ್ಲಿಯಾದರು ಮತ್ತೆ ಫಾರ್ಮ್ಗೆ ಮರಳುವ ನೀರಿಕ್ಷೆ ಇದೆ.