ಲಂಡನ್:ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈಗಲೇ ನಿವೃತ್ತಿಯಾಗುವುದು ಬೇಡ ಎಂದು ಅಭಿಮಾನಿಗಳು ಟ್ವಿಟರ್ನಲ್ಲಿ ಬೇಡಿಕೆ ಇಟ್ಟಿದ್ದಾರೆ.
ತಮ್ಮ ನಿವೃತ್ತಿ ನಿರ್ಧಾರದ ಬಗ್ಗೆ ಧೋನಿ ಯೋಚಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಕೆಲವು ಕ್ರಿಕೆಟ್ ದಿಗ್ಗಜರು ಹಾಗೂ ಕೆಲ ಭಾರತೀಯ ಅಭಿಮಾನಿಗಳು ಯಾವಾಗ ಭಾರತ ಸೋಲನುಭವಿಸುತ್ತದೆಯೋ ಅವತ್ತು ಧೋನಿಯನ್ನ ದೂಷಿಸುವ ಪರಿಪಾಠ ಮುಂದುವರೆಸಿದ್ದಾರೆ. ಇದು ಈ ವಿಶ್ವಕಪ್ನಲ್ಲೂ ಕೆಲವು ಪಂದ್ಯಗಳಲ್ಲಿ ಮುಂದುವರಿದೆ.
ಇದೀಗ ಬುಧವಾರ ನಡೆದ ಸೆಮಿಫೈನಲ್ ಪಂದ್ಯದ ವೇಳೆ ಭಾರತ 24 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ಕ್ರೀಸ್ಗಾಗಮಿಸಿದ ಧೋನಿ 49ನೇ ಓವರ್ ತನಕ ಬ್ಯಾಟಿಂಗ್ ನಡೆಸಿ ಭಾರತದ ಗೆಲುವಿಗಾಗಿ ಹೋರಾಟ ನಡೆಸಿದರು. ಆದರೆ 49 ನೇ ಓವರ್ನಲ್ಲಿ 2 ರನ್ಗಳಿಗಾಗಿ ಓಡುವ ಧಾವಂತದಲ್ಲಿ ರನ್ಔಟ್ ಆಗುತ್ತಿದ್ದಂತೆ 3ನೇ ವಿಶ್ವಕಪ್ ಆಸೆಯಲ್ಲಿದ್ದ ಭಾರತೀಯರ ಕನಸು ನುಚ್ಚುನೂರಾಯಿತು.
'ಧೋನಿ ಕಡೇಯ ಪಂದ್ಯ ಇದೇ' ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಸುದ್ದಿ ಹರಡಿಸಿರುವುದು ಅಭಿಮಾನಿಗಳಲ್ಲಿ ಮಾತ್ರ ಆತಂಕ ಮೂಡಿಸಿದೆ. ಧೋನಿ ಈಗಲೇ ನಿವೃತ್ತಿಯಾಗುವುದು ಬೇಡ ಎಂದು #Dhoni forever, #donotretireDhoni ಎಂದು ಹ್ಯಾಶ್ ಟ್ಯಾಗ್ನೊಡನೆ ಟ್ವಿಟರ್ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದು ಸದ್ಯಕ್ಕೆ ದೇಶದ 2ನೇ ಟ್ವಿಟ್ಟರ್ ಟ್ರೆಂಡ್ ಆಗಿದೆ.
ಪಂದ್ಯ ಮುಗಿದ ನಂತರ ಸ್ವತಃ ಎದುರಾಳಿ ನಾಯಕ ಕೇನ್ ವಿಲಿಯಮ್ಸನ್ ಕೂಡ ಧೋನಿಯಿಂದಲೇ ಪಂದ್ಯ ಕೂತೂಹಲಘಟ್ಟಕ್ಕೆ ಬಂದಿತ್ತು. ಜಡೇಜಾರ ಜೊತೆ ಅವರು ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದರು ಎಂದು ಶಹಬ್ಬಾಸ್ಗಿರಿ ನೀಡಿದ್ದರು.
ಶ್ರೀಲಂಕಾದ ಲಸಿತ್ ಮಲಿಂಗಾ ಕೂಡ ಧೋನಿ ಇನ್ನೂ ಒಂದೆರಡು ವರ್ಷ ತಂಡದಲ್ಲಿದ್ದು, ಯುವ ಆಟಗಾರರಿಗೆ ಸ್ಪೂರ್ತಿಯಾಗಿರಬೇಕು ಎಂದು ಕೊನೇಯ ಲೀಗ್ ಪಂದ್ಯಕ್ಕೂ ಮುನ್ನ ನಡೆದಿದ್ದ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಆದರೆ ತಮ್ಮ ನಿವೃತ್ತಿ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಧೋನಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಶಾಂತ ರೀತಿಯಿಂದಿದ್ದಾರೆ. ಈ ವಿಚಾರದ ಬಗ್ಗೆ ಧೋನಿ ಪ್ರತಿಕ್ರಿಯೆಗಾಗಿ ಕೊಟ್ಯಂತರ ಅಭಿಮಾನಿಗಳು ಕಾಯುತ್ತಿದ್ದು, ಧೋನಿ ಈಗಲೇ ಅಂತರಾಷ್ಟೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸುವುದಿಲ್ಲ ಎಂಬ ನಿರೀಕ್ಷೆಯಲ್ಲಿದ್ದಾರೆ.