ಮುಂಬೈ:ರಣಜಿಯಂತಹ ಕ್ರಿಕೆಟ್ ಟೂರ್ನಿಗಳಿಗೆ ಆಟಗಾರರು ಪ್ರಯಾಣಿಸಲು ಸುರಕ್ಷಿತ ಎನಿಸುವವರೆಗೂ ದೇಶಿ ಟೂರ್ನಿಗಳನ್ನು ಆಯೋಜಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಕೊರೊನಾದಿಂದ ಈಗಾಗಲೇ ಸಾಕಷ್ಟು ಕ್ರಿಕೆಟ್ ಟೂರ್ನಿಗಳು ರದ್ದಾಗಿವೆ. ಐಪಿಎಲ್ ಕೂಡ ಮುಂದೂಡಲ್ಪಟ್ಟಿದ್ದು, ಮುಂದಿನ ಅಕ್ಟೋಬರ್ನಲ್ಲಿ ನಡೆಯುವ ಸಾಧ್ಯತೆಯಿದೆ. ಹೀಗಿರುವಾಗ ಆಗಸ್ಟ್ನಿಂದ ಆರಂಭವಾಗಬೇಕಿರುವ ದೇಶಿ ಕ್ರಿಕೆಟ್ ಟೂರ್ನಿಗಳಾದ ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟಿ-20 ಟ್ರೋಫಿ, ವಿಜಯ್ ಹಜಾರೆ ಟೂರ್ನಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಅಸಾಧ್ಯ ಎಂದು ಗಂಗೂಲಿ ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶಿ ಟೂರ್ನಿಗಳಿಗೆ ತಂಡಗಳು ಅಂತರ್ ರಾಜ್ಯ ಪ್ರಯಾಣ ಮಾಡಬೇಕಾಗಿರುತ್ತದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಯಾಣ ಸುಖಕರವಾಗಿರುವುದಿಲ್ಲ. ಆಟಗಾರರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.