ಲೀಡ್ಸ್: ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿ ಇನ್ನು ಒಂದೆರಡು ವರ್ಷ ಕ್ರಿಕೆಟ್ ಆಡಿಬೇಕು. ಅವರ ಅನುಭವ ಭವಿಷ್ಯದ ಯುವ ಆಟಗಾರರಿಗೆ ತುಂಬ ಅನುಕೂಲವಾಗಲಿದ ಎಂದು ಯಾರ್ಕರ್ ಕಿಂಗ್ ಮಲಿಂಗಾ ಅಭಿಪ್ರಾಯ ಪಟ್ಟಿದ್ದಾರೆ.
ಭಾರತದ ಅತ್ಯುತ್ತಮ ಫಿನಿಶರ್ ಎಂದು ಕರೆಯಲ್ಪಡುವ ಧೋನಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬ್ಯಾಟಿಂಗ್ ಪ್ರದರ್ಶಸಿ ಟೀಕೆಗೆ ಗುರಿಯಾಗಿದ್ದರು. ಆದರೆ ಮಲಿಂಗಾ ಮಾತ್ರ ಧೋನಿ ಪರ ನಿಂತಿದ್ದು ಧೋನಿಯನ್ನು ಯಾರಿಂದಲೂ ಸೋಲಿಸಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.
"ನನ್ನ ಪ್ರಕಾರ ಧೋನಿ ಇನ್ನೊಂದರೆಡು ವರ್ಷ ಕ್ರಿಕೆಟ್ನಲ್ಲಿರಬೇಕು. ಅವರು ಕಳೆದ 10 ವರ್ಷಗಳಿಂದ ಅತ್ಯುತ್ತಮ ಫಿನಿಶರ್ ಆಗಿದ್ದಾರೆ. ಭವಿಷ್ಯದಲ್ಲೂ ಧೋನಿಯನ್ನು ಹಿಂದಿಕ್ಕುವ ವಿಕೆಟ್ ಕೀಪರ್ ಬರಲಾರರು. ಧೋನಿಯ ಅನುಭವ ಯುವಕರಿಗೆ ಎಲ್ಲಾ ರೀತಿಯ ಸನ್ನಿವೇಶಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿಸಿಕೊಡಲಿದೆ. ಧೋನಿಯಿಂದ ಭಾರತ ತಂಡ ಎಲ್ಲಾ ಮಾದರಿಯಲ್ಲೂ ಯಶಸ್ವಿ ತಂಡವಾಗಿದೆ. ನನಗನಿಸಿದ ಮಟ್ಟಿಗೆ ಟೀಮ್ ಇಂಡಿಯಾ ಯಾವ ತಂಡವನ್ನಾದರೂ ಮಣಿಸುವ ತಾಕತ್ತನ್ನು ಹೊಂದಿದೆ" ಎಂದು ಎಎನ್ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.