ಲಂಡನ್:ಅಫ್ಘಾನಿಸ್ತಾನದ ವಿರುದ್ಧ ಧೋನಿ ಹಾಗೂ ಕೇದಾರ್ ಜಾಧವ್ರ ನಿಧಾನಗತಿ ಆಟ ಪ್ರಶ್ನಿಸಿದ್ದ ಬ್ಯಾಟಿಂಗ್ ದಿಗ್ಗಜ ಸಚಿನ್ ವಿರುದ್ಧ ಧೋನಿ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.
ಒಂದು ಕಡೆ ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್ಮನ್ ಸಚಿನ್, ಮತ್ತೊಂದು ಕಡೆ ವಿಶ್ವ ಕ್ರಿಕೆಟ್ನ ಅತ್ಯುತ್ತಮ ಕ್ಯಾಪ್ಟನ್ ಧೋನಿ ಅಭಿಮಾನಿಗಳು ಸಚಿನ್ ನೀಡಿದ ಒಂದು ಹೇಳಿಕೆಯಿಂದ ಕಿತ್ತಾಡುತ್ತಿದ್ದಾರೆ.
ಖಾಸಗಿ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ಸಚಿನ್, ಧೋನಿ ಹಾಗೂ ಜಾಧವ್ ಜತೆಯಾಟದ ಬಗ್ಗೆ ನಾನು ಸಂತುಷ್ಟನಾಗಿಲ್ಲ. ಬಹುಶಃ ಇಬ್ಬರು ಇನ್ನು ಸ್ವಲ್ಪ ಉತ್ತಮವಾಗಿ ಆಡಬಹುದಿತ್ತು. ನಾವು 34 ಓವರ್ ಸ್ಪಿನ್ ಬೌಲಿಂಗ್ಗೆ ಕೇವಲ 119 ರನ್ ಗಳಿಸಿದ್ವಿ. ಈ ಒಂದು ವಲಯದಲ್ಲಿ ನಾವು ಕಂಫರ್ಟ್ ಆಗಿರಲಿಲ್ಲ. ಅಲ್ಲಿ ಧನಾತ್ಮಕ ಉದ್ದೇಶದ ಕೊರತೆಯಿತ್ತು. ಇಬ್ಬರು ಸ್ಟ್ರೈಕ್ ಬದಲಿಸಿಕೊಳ್ಳುವಲ್ಲಿ ವಿಫಲರಾಗಿದ್ದರು ಎಂದು ಸಚಿನ್ ಅಸಮಾಧಾನ ವ್ಯಕ್ತಪಡಿಸಿದ್ದರು.
ಸಚಿನ್ ಇಷ್ಟು ವರ್ಷಗಳಲ್ಲಿ ಮೊದಲ ಬಾರಿಗೆ ಧೋನಿ ಕುರಿತು ಅಸಮಾಧಾನ ಹೊರ ಹಾಕಿದ್ದರು. ಆದರೆ ಸಚಿನ್ ಟೀಕೆಯಿಂದ ರೊಚ್ಚಗೆದ್ದಿರುವ ಧೋನಿ ಅಭಿಮಾನಿಗಳು ಸಚಿನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆ ಸುರಿಸಿದ್ದಾರೆ.
ಧೋನಿಯ ನಿಧಾನಗತಿ ಆಟವನ್ನು ಟೀಕಿಸುವುದಾದರೆ, ನೀವು 90 ರನ್ ಗಳಿಸಿದಾಗ ಶತಕಕ್ಕಾಗಿ 20 ಎಸೆತ ತೆಗೆದುಕೊಳ್ಳುತ್ತಿದ್ದಿದ್ದನ್ನು ನಾವು ಮರೆತಿಲ್ಲ. ನೀವು ಶತಕಕ್ಕಾಗಿಯೇ ಎಷ್ಟೋ ಪಂದ್ಯಗಳನ್ನು ಬಲಿ ಕೊಟ್ಟಿದ್ದೀರಾ. ನಿಮ್ಮ 100 ಶತಕಕ್ಕೆ ಎಷ್ಟು ಎಸೆತ ತೆಗೆದುಕೊಮಡಿದ್ದೀರಾ ನೆನೆಪು ಮಾಡಿಕೊಳ್ಳಿ ಎಂದು ಎಂದು ಸಚಿನ್ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ಕೆಲವರು ನೀವು ಅತ್ಯುತ್ತಮ ಬ್ಯಾಟ್ಸ್ಮನ್ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ನೀವು ತಂಡದ ಬಗ್ಗೆ ಎಂದೂ ಚಿಂತಿಸುತ್ತಿರಲಿಲ್ಲ. ಆದರೆ ಧೋನಿ ತಂಡಕ್ಕೋಸ್ಕರ ಮಾತ್ರ ಆಡಿದ್ದಾರೆ. ತಂಡ ಸಂಕಷ್ಟದಲ್ಲಿದ್ದಾಗ ಮಾತ್ರ ನಿಧಾನಗತಿಯಾಗಿ ಆಟವಾಡಲೇಬೇಕಾದ ಸನ್ನಿವೇಶವಿರುತ್ತದೆ. ಧೋನಿ ವಿಕೆಟ್ ಕಳೆದುಕೊಂಡರೆ ನಂತರ ಬರುವ ಭಾರತ ತಂಡದ ಬ್ಯಾಟ್ಸ್ಮನ್ಗಳು ಕ್ರೀಸ್ನಲ್ಲಿ ನಿಲ್ಲಲು ಭಯ ಪಡುತ್ತಾರೆ ಎಂದು ಧೋನಿ ಪರ ನಿಂತಿದ್ದಾರೆ.