ದುಬೈ:ಐಪಿಎಲ್ನಲ್ಲಿ 4 ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಲೀಗ್ ಇತಿಹಾಸದಲ್ಲೇ ಬಲಿಷ್ಠ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ಟಾರ್ ಆಟಗಾರರ ದಂಡನ್ನೇ ಹೊಂದಿರುವ ಈ ತಂಡ ಅತಿ ಹೆಚ್ಚು ಬಾರಿ ಸೋಲು ಕಂಡಿರುವುದು ಡೆಲ್ಲಿ ಹಾಗೂ ಪಂಜಾಬ್ ವಿರುದ್ಧ ಎಂದರೆ ಆಶ್ಚರ್ಯಪಡಬೇಕಾಗಿಲ್ಲ.
ರೋಹಿತ್ ಶರ್ಮಾ ನಾಯಕನಾಗಿ ನೇಮಕಗೊಂಡ ಮೇಲೆ ಮುಂಬೈ ಅದೃಷ್ಟವೇ ಬದಲಾಗಿದೆ. ಆ ತಂಡ 2013, 2015, 2017 ಹಾಗೂ 2019ರಲ್ಲಿ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಆದರೆ ಭಾನುವಾರದ ಪಂದ್ಯದಲ್ಲಿ ಪಂಜಾಬ್ ವಿರುದ್ಧ 2 ಸೂಪರ್ ಓವರ್ಗಳ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ನಿರಾಶೆ ಅನುಭವಿಸಿತು.
ಪಂಜಾಬ್ ಲೀಗ್ನಲ್ಲಿ ಒಮ್ಮೆಯೂ ಚಾಂಪಿಯನ್ ಪಟ್ಟಕ್ಕೇರಿಲ್ಲ. ಆದರೆ ಮುಂಬೈ ವಿರುದ್ಧ ಮಾತ್ರ ಗರಿಷ್ಠ ಗೆಲುವಿನ ದಾಖಲೆಯನ್ನು ಕಾಪಾಡಿಕೊಂಡಿದೆ. ನಿನ್ನೆಯ ಪಂದ್ಯದಲ್ಲಿ ರೋಹಿತ್ ಬಳಗವನ್ನು ಮಣಿಸು ಮೂಲಕ ಐಪಿಎಲ್ನಲ್ಲಿ ಮುಂಬೈ ವಿರುದ್ಧ ಹೆಚ್ಚು ಗೆಲುವು ದಾಖಲಿಸಿದ ತಂಡ ಎಂಬ ಹೆಗ್ಗಳಿಕೆಯನ್ನು ಚೆನ್ನೈ ಮತ್ತು ಡೆಲ್ಲಿ ತಂಡಗಳ ಜೊತೆ ಹಂಚಿಕೊಂಡಿದೆ.
ಮುಂಬೈ ವಿರುದ್ಧ ಡೆಲ್ಲಿ ಮತ್ತು ಚೆನ್ನೈ ತಂಡಗಳು ತಲಾ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದವು. ಇದೀಗ ಪಂಜಾಬ್ ಕೂಡ ಮುಂಬೈ ವಿರುದ್ಧ 12ನೇ ಗೆಲುವು ದಾಖಲಿಸಿದೆ. ಈ ಮೂರು ತಂಡಗಳನ್ನು ಹೊರೆತುಪಡಿಸಿದರೆ, ರಾಜಸ್ಥಾನ್ ಮತ್ತು ಬೆಂಗಳೂರು ತಂಡ ತಲಾ 10 ಬಾರಿ ಮುಂಬೈಗೆ ಸೋಲುಣಿಸಿವೆ.