ಸಿಡ್ನಿ(ಆಸ್ಟ್ರೇಲಿಯಾ): ಮೂರನೇ ಟೆಸ್ಟ್ ಪಂದ್ಯದ ವೇಳೆ ಭಾರತೀಯ ಆಟಗಾರರು ಆಸೀಸ್ ಅಭಿಮಾನಿಗಳಿಂದ ಜನಾಂಗೀಯ ನಿಂದನೆಗೆ ಗುರಿಯಾಗಿದ್ದು, ಕ್ರಿಕೆಟ್ ಆಸ್ಟ್ರೇಲಿಯಾ ಟೀಂ ಇಂಡಿಯಾ ಆಟಗಾರರ ಕ್ಷಮೆ ಕೇಳಿದೆ.
ಮೂರನೇ ದಿನದಾಟದ ಮುಕ್ತಾಯದ ನಂತರ ಟೀಂ ಇಂಡಿಯಾ ನಾಯಕ ಅಜಿಂಕ್ಯಾ ರಹಾನೆ ಅಂಪೈರ್‌ಗಳೊಂದಿಗೆ ಮಾತನಾಡಿದ್ದು, ಕೆಲ ಅಭಿಮಾನಿಗಳು ಆಟಗಾರರನ್ನು ನಿಂದಿಸಿರುವ ಬಗ್ಗೆ ದೂರು ನೀಡಿದ್ದರು. ಇಂದು ಕೂಡ ಆಸೀಸ್ ಅಭಿಮಾನಿಗಳು ಸಿರಾಜ್ ಅವರನ್ನು ನಿಂದಿಸಿದ್ದು, ಕೆಲವರನ್ನು ಮೈದಾನದಿಂದ ಹೊರ ಕಳುಹಿಸಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಂತರ ಟ್ವೀಟ್ ಮಾಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, ತಾರತಮ್ಯದ ನಡವಳಿಕೆಯನ್ನು ಖಂಡಿಸಿದೆ ಮತ್ತು ಇಂಥ ವರ್ತನೆ ತೋರಿದ ಎಲ್ಲರ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
"ಸರಣಿಯ ಆತಿಥೇಯರಾಗಿ, ನಾವು ಭಾರತೀಯ ಕ್ರಿಕೆಟ್ ತಂಡದಲ್ಲಿರುವ ನಮ್ಮ ಸ್ನೇಹಿತರಿಗೆ ಕ್ಷಮೆಯಾಚಿಸುತ್ತೇವೆ ಮತ್ತು ನಾವು ಈ ವಿಷಯವನ್ನು ಪೂರ್ಣ ಪ್ರಮಾಣದಲ್ಲಿ ವಿಚಾರಣೆಗೆ ಒಳಪಡಿಸುತ್ತೇವೆ ಎಂಬ ಭರವಸೆ ನೀಡುತ್ತೇವೆ" ಎಂದು ಭದ್ರತಾ ವಿಭಾಗದ ಮುಖ್ಯಸ್ಥ ಸೀನ್ ಕ್ಯಾರೊಲ್ ಹೇಳಿದ್ದಾರೆ.
ನಿಂದಿಸಿದ ವ್ಯಕ್ತಿಗಳನ್ನು ಗುರುತಿಸಿದ ನಂತರ, ಅವರ ವಿರುದ್ಧ ಕಿರುಕುಳ-ವಿರೋಧಿ ಸಂಹಿತೆಯ ಅಡಿಯಲ್ಲಿ ಸಾಧ್ಯವಾದಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ತಪ್ಪಿತಸ್ಥರಿಗೆ ದೀರ್ಘಾವಧಿ ನಿಷೇಧ ವಿಧಿಸುವುದು, ಅಂಥವರನ್ನು ಪೊಲೀಸ್ ತನಿಖೆಗೆ ಒಳಪಡಿಸುವುದು ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕ್ಯಾರೊಲ್ ಭರವಸೆ ನೀಡಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ತಾರತಮ್ಯ ವಿರೋಧಿ ನೀತಿಯ ಪ್ರಕಾರ, ಕ್ರಿಕೆಟ್ ಆಸ್ಟ್ರೇಲಿಯಾ ಈ ಘಟನೆಯ ಬಗ್ಗೆ ತನಿಖೆ ನಡೆಸಿ 2 ವಾರಗಳಲ್ಲಿ ಐಸಿಸಿಗೆ ವರದಿ ಸಲ್ಲಿಸಬೇಕಿದೆ.