ಮುಂಬೈ:ಮದನ್ಲಾಲ್ ಮುಂದಾಳತ್ವದ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಭಾರತ ತಂಡದ ಮಾಜಿ ವೇಗಿ ಚೇತನ್ ಶರ್ಮಾ, ಅಬೆ ಕುರುವಿಲ್ಲಾ ಮತ್ತು ಡೆಬಾಸಿಸ್ ಮೊಹಂತಿಯವರನ್ನು ಆಯ್ಕೆ ಸಮಿತಿಯ ಸದಸ್ಯರಾಗಿ ಶಿಫಾರಸು ಮಾಡಿದೆ.
ನಂತರ ಸಮಿತಿ 1987ರ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿರುವ ಚೇತನ್ ಶರ್ಮಾ ಅವರನ್ನು ಸೀನಿಯಾರಿಟಿ ಆಧಾರದ ಮೇಲೆ ಆಯ್ಕೆ ಸಮಿತಿ ಮುಖ್ಯಸ್ಥರನ್ನಾಗಿ ಶಿಫಾರಸು ಮಾಡಿದೆ. ಈ ವರ್ಷದ ಆರಂಭದಲ್ಲಿ ಇದೇ ಸಮಿತಿ ಕನ್ನಡಿಗ ಸುನೀಲ್ ಜೋಶಿ ಮತ್ತು ಹರ್ವಿಂದರ್ ಸಿಂಗ್ರನ್ನು ನೇಮಕ ಮಾಡಿತ್ತು.
ಈ ಕುರಿತು ಮಧ್ಯಮದೊಂದಿಗೆ ಮಾತನಾಡಿರುವ ಸಿಎಸಿ ಮುಖ್ಯಸ್ಥ ಮದನ್ ಲಾಲ್, ಹೌದು, ಆ ಮೂವರು( ಚೇತನ್ ಶರ್ಮಾ, ಅಬೆ ಕುರುವಿಲ್ಲಾ ಮತ್ತು ಡೆಬಾಸಿಸ್) ಆಯ್ಕೆಯಾಗಿದ್ದಾರೆ. ಅದರಲ್ಲಿ ಹೆಚ್ಚು ಪಂದ್ಯಗಳನ್ನು ಆಡಿರುವವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ" ಎಂದು ತಿಳಿಸಿದ್ದಾರೆ.
ಇದೀಗ ಈ ಮೂರು ಹೊಸ ಸದಸ್ಯರು ಸುನೀಲ್ ಜೋಶಿ ಮತ್ತು ಹರ್ವಿಂದರ್ ಸಿಂಗ್ ಅವರ ಜೊತೆಗೆ ಆಯ್ಕೆ ಸಮಿತಿ ಸೇರಿಕೊಳ್ಳಲಿದ್ದಾರೆ. ಈ ಹೊಸ ಆಯ್ಕೆ ಸಮಿತಿ ಮುಂದಿನ ವರ್ಷಾರಂಭದಲ್ಲಿ ನಡೆಯುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ತಂಡವನ್ನು ಆಯ್ಕೆ ಮಾಡಲಿದೆ.
ಭಾರತದ ಮಾಜಿ ವೇಗಿ ಅಜಿತ್ ಅಗರ್ಕರ್ ರಾಷ್ಟ್ರೀಯ ಆಯ್ಕೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಅಗರ್ಕರ್ ಭಾರತಕ್ಕಾಗಿ 200 ಪಂದ್ಯಗಳನ್ನು ಆಡಿದ್ದರಿಂದ ಈ ಹುದ್ದೆಗೆ ಅವರು ಸೂಕ್ತ ಎನ್ನಲಾಗಿತ್ತು. ಆದರೆ ಅವರನ್ನು ಸಿಎಸಿ ಆಯ್ಕೆ ಮಾಡಿಲ್ಲ. ಅಗರ್ಕರ್ ನಾಯಕತ್ವ ವಿಭಜನೆಗೆ ಒತ್ತು ನೀಡಿದ್ದರಿಂದ ಅವರನ್ನು ತಿರಸ್ಕರಿಸಿರಬಹುದು ಎಂದು ಹೇಳಲಾಗುತ್ತಿದೆ.