ನವದೆಹಲಿ: ಫಿರೋಜ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಅರುಣ್ ಜೇಟ್ಲಿ ಪ್ರತಿಮೆ ಸ್ಥಾಪಿಸಲು ಹೊರಟಿರುವ ಡಿಡಿಸಿಎ ನಡೆಯನ್ನು ಖಂಡಿಸಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ 2019ರಲ್ಲಿ ಸ್ಟೇಡಿಯಂನ ಸ್ಟ್ಯಾಂಡ್ವೊಂದಕ್ಕೆ ಇಟ್ಟಿರುವ ತಮ್ಮ ಹೆಸರನ್ನು ತೆಗೆದು ಹಾಕುವಂತೆ ತಿಳಿಸಿದ್ದಾರೆ.
ಜೇಟ್ಲಿ 1999ರಿಂದ 2013ರ ತನಕ 14 ವರ್ಷಗಳ ಕಾಲ ಡಿಡಿಸಿಎ ಅಧ್ಯಕ್ಷರಾಗಿದ್ದರು. ಹಾಗಾಗಿ ಅವರ ನೆನಪಿನ ಸ್ಮರಣಾರ್ಥ ಕೋಟ್ಲಾದಲ್ಲಿ ಆರು ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲು ಡಿಡಿಸಿಎ ನಿರ್ಧರಿಸಿದೆ.
ಡಿಡಿಸಿಎ ಕ್ರಿಕೆಟಿಗರಿಗಿಂತ ಆಡಳಿತಗಾರರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ. ಇದು ಸ್ವಜನ ಪಕ್ಷಪಾತವನ್ನು ಉತ್ತೇಜಿಸುತ್ತದೆ ಎಂದು ತನ್ನ ಸದಸ್ಯತ್ವವನ್ನು ತ್ಯಜಿಸಿದ್ದಾರೆ. ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಸಚಿವರಾಗಿದ್ದ ಅರುಣ್ ಜೇಟ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ನಂತರ ಪಿರೋಜ್ ಶಾ ಕೋಟ್ಲಾ ಸ್ಟೇಡಿಯಂಗೆ ಅರುಣ್ ಜೇಟ್ಲಿ ಹೆಸರನ್ನು ನಾಮಕರಣ ಮಾಡಲಾಗಿತ್ತು.
ಇದೀಗ ಅವರ ಪುತ್ಥಳಿಯನ್ನು ಸ್ಟೇಡಿಯಂನಲ್ಲಿ ನಿರ್ಮಾಣ ಮಾಡಲು ಹೊರಟಿರುವುದಕ್ಕೆ ಬೇಡಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ತಕ್ಷಣವೇ ಜಾರಿಗೆ ಬರುವಂತೆ ಸ್ಟೇಡಿಯಂ ಸ್ಟಾಂಡ್‌ನಲ್ಲಿರುವ ನನ್ನ ಹೆಸರನ್ನು ತೆಗೆದು ಹಾಕಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. ಅಲ್ಲದೇ ಈ ಮೂಲಕ ಡಿಡಿಸಿಎಯಲ್ಲಿರುವ ನನ್ನ ಸದಸ್ವತ್ವವನ್ನು ತ್ಯಜಿಸುತ್ತೇನೆ ಎಂದು ಬೇಡಿ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.