ದುಬೈ:ಬಿಸಿಸಿಐ 2021ರಲ್ಲಿ ಐಸಿಸಿ ಟಿ-20 ವಿಶ್ವಕಪ್ ಮುಂದಿನ ವರ್ಷ ಯಶಸ್ವಿಯಾಗಿ ನಡೆಸಲು ಬಿಸಿಸಿಐ ಬದ್ಧವಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗುರುವಾರ ಹೇಳಿದ್ದಾರೆ.
ಐಸಿಸಿ ಟಿ-20 ವಿಶ್ವಕಪ್ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಆದರೆ, ಕೋವಿಡ್ 19 ಕಾರಣ 2022ಕ್ಕೆ ಮುಂದೂಡಲ್ಪಟ್ಟಿತು. 7ನೇ ಆವೃತ್ತಿಯ ಟಿ-20 ವಿಶ್ವಕಪ್ ಆತಿಥ್ಯ ಭಾರತಕ್ಕೆ ಸಿಕ್ಕಿದೆ. 2021ರ ಅಕ್ಟೋಬರ್ - ನವೆಂಬರ್ನಲ್ಲಿ ಈ ವಿಶ್ವಮಟ್ಟದ ಸ್ಪರ್ಧೆಯನ್ನು ಬಿಸಿಸಿಐ ಆಯೋಜಿಸಲಿದೆ.
"ಈ ಮಹತ್ವದ ಕ್ರೀಡಾಕೂಟದಲ್ಲಿ ಸಂಬಂಧಪಟ್ಟ ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷತೆಯನ್ನು ನೋಡಿಕೊಳ್ಳುವುದಕ್ಕಾಗಿ ಬಿಸಿಸಿಐ ಸಿದ್ಧವಿದೆ" ಎಂದು ಶಾ ಹೇಳಿಕೆಯನ್ನು ಐಸಿಸಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ
ವಿಶ್ವಕಪ್ಗಾಗಿ ಭಾರತಕ್ಕೆ ಆಗಮಿಸುವ 15 ತಂಡಗಳಿಗೆ ಅತ್ಯುತ್ತಮವಾದ ಆತಿಥ್ಯವನ್ನು ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಭರವಸೆ ನೀಡಿದ್ದಾರೆ.
"ಐಸಿಸಿ ಮತ್ತು ಸದಸ್ಯ ಕ್ರಿಕೆಟ್ ಮಂಡಳಿಗಳಿಗೆ ಭಾರತ ಗೌರವಯುತ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ನಾವು ನಿಮ್ಮ ತವರಿನಲ್ಲಿ ನೀವು ಅನುಭವಿಸಬಹುದಾದ ಆತಿಥ್ಯವನ್ನೇ ನೀಡುವುದಾಗಿ ಭರವಸೆ ನೀಡುತ್ತೇನೆ. ಈ ಸಾಂಕ್ರಾಮಿಕ ಕಾಲದಲ್ಲಿ ಹಲವು ನಿರ್ಬಂಧಗಳಿದ್ದರೂ ಬಿಸಿಸಿಐ ಹೊಸತನ ಮತ್ತು ಹೊಂದಿಕೊಳ್ಳುವ ನೀತಿಯನ್ನು ನಂಬುತ್ತದೆ. ನಾವು ಪ್ರತಿ ಸವಾಲುಗಳನ್ನು ಗೆಲ್ಲುತ್ತೇವೆಂಬ ವಿಶ್ವಾಸವಿದೆ" ಎಂದು ಅವರು ತಿಳಿಸಿದ್ದಾರೆ.
ಐಸಿಸಿ 2 ವರ್ಷಕ್ಕೊಮ್ಮೆ ಟಿ-20 ವಿಶ್ವಕಪ್ ಆಯೋಜಿಸುತ್ತದೆ. 2016ರಲ್ಲಿ ಕೊನೆಯ ಟಿ20 ವಿಶ್ವಕಪ್ ನಡೆದಿತ್ತು. 2019ರಲ್ಲಿ ಏಕದಿನ ವಿಶ್ವಕಪ್ ಆಯೋಜಿಸಿದ್ದರಿಂದ 2020 ಮತ್ತು 2021ರಲ್ಲಿ ಸತತ 2 ವಿಶ್ವಕಪ್ ಆಯೋಜಿಸಲು ಐಸಿಸಿ ಯೋಜನೆ ರೂಪಿಸಿತ್ತು. ಆದರೆ, ಕೋವಿಡ್ ಪರಿಣಾಮ ಯೋಜನೆ ವಿಫಲವಾಗಿದೆ. 2020ರ ಬದಲಾಗಿ 2022ಕ್ಕೆ ಒಂದು ಟಿ-20 ವಿಶ್ವಕಪ್ ಮುಂದೂಡಿದೆ. 2023ರಕ್ಕೆ ಮತ್ತೆ ಭಾರತದಲ್ಲೇ ಏಕದಿನ ವಿಶ್ವಕಪ್ ಕೂಡ ನಡೆಯಲಿದೆ.