ನವದೆಹಲಿ:ಕೋವಿಡ್ 19 ನಿಂದ ಈಗಾಗಲೆ ಬಹುತೇಕ ಕ್ರಿಕೆಟ್ ಟೂರ್ನಿಗಳು ರದ್ದಾಗಿವೆ. ಇನ್ನು ಕೆಲವು ಟೂರ್ನಮೆಂಟ್ಗಳು ಮುಂದೂಡಲಾಗಿದೆ. ಇದೀಗ ಬಿಸಿಸಿಐ 2020ರ ದೇಶಿ ಋತುವಿನಲ್ಲಿ ಕೇವಲ ರಣಜಿ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗಳನ್ನು ಮಾತ್ರ ಆಯೋಜಿಸಲಿದೆ ಎಂದು ತಿಳಿದುಬಂದಿದೆ.
ಕೊರೊನಾ ವೈರಸ್ ಹಾಗೂ ಐಪಿಎಲ್ ಕಾರಣದಿಂದ ನವೆಂಬರ್ವರೆಗೂ ಬಿಸಿಸಿಐ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಕೆಲವು ಟೂರ್ನಿಗಳು ರದ್ದಾಗುವ ಸಾಧ್ಯತೆಯಿದೆ. ರಣಜಿ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ಗಳನ್ನು ಆಯೋಜಿಸಿ, ದುಲೀಪ್ ಟ್ರೋಫಿ , ವಿಜಯ್ ಹಜಾರೆ ಟ್ರೋಪಿ ಸೇರಿದಂತೆ ಕೆಲವು ಟೂರ್ನಮೆಂಟ್ಗಳನ್ನು ಬಿಸಿಸಿಐ ರದ್ದುಗೊಳಿಸಲಿದೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ನಲ್ಲಿ ಬಹುತೇಕ ಬಿಸಿಸಿಐ ವ್ಯಾಪ್ತಿಯ ದೇಶಿ ಕ್ರಿಕೆಟ್ ಟೂರ್ನಿಗಳು ಆರಂಭವಾಗುತ್ತವೆ. ಆದರೆ ಈ ಬಾರಿ ಮಾರ್ಚ್ನಲ್ಲಿ ನಡೆಯಬೇಕಿದ್ದ ಐಪಿಎಲ್ ಕೊರೊನಾ ವೈರಸ್ ಕಾರಣದಿಂದ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ನಡೆಯಲಿದೆ. ಹೀಗಾಗಿ ಮಿಲಿಯನ್ ಡಾಲರ್ ಟೂರ್ನಮೆಂಟ್ಗಾಗಿ ಕೆಲವು ಟೂರ್ನಿಗಳನ್ನು ರದ್ದುಗೊಳಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
ಐಪಿಎಲ್ ಸೆಪ್ಟೆಂಬರ್ನಲ್ಲಿ ನಡೆಯಲಿರುವುದರಿಂದ ಈ ಅವಧಿಯಲ್ಲಿ ನಡೆಯಬೇಕಿದ್ದ ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ ಮತ್ತು ವಿಜಯ್ ಹಜಾರೆ ಟೂರ್ನಿಗಳನ್ನು ಬಿಸಿಸಿಐ ರದ್ದುಗೊಳಿಸಲಿದ ಎನ್ನಲಾಗಿದೆ.
ಇನ್ನು ಈ ಎರಡು ಟೂರ್ನಿಗಳು ಪ್ರಮುಖ 2 ನಗರದ ನಾಲ್ಕು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ರಣಜಿ ಟೂರ್ನಿಯ ಅಂತರವನ್ನು ತಗ್ಗಿಸಲು ಬಿಸಿಸಿಐ ಹೊಸ ಯೋಜನೆ ರೂಪಿಸಲು ಮುಂದಾಗಿದೆ. ಮುಷ್ತಾಕ್ ಅಲಿ ಟಿ20ಯಲ್ಲಿ 38 ತಂಡಗಳು ಭಾಗವಹಿಸಲಿದ್ದು, 6 ಗುಂಪುಗಳಾಗಿ ವಿಂಗಡಿಸಲಿದೆ. ಈ ಟೂರ್ನಿ ಪ್ರತಿ ಗುಂಪಿನ ಪಂದ್ಯಗಳು ಒಂದು ನಗರದ ಎರಡು ಕ್ರೀಡಾಂಗಣದಲ್ಲಿ ನಡೆಯಲಿವೆ.