ನವದೆಹಲಿ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಸ್ಟೇಡಿಯಂನಲ್ಲಿ ಪಂದ್ಯಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.
2021ರ ಐಪಿಎಲ್‌ಗೆ ಇನ್ನೂ ಅಧಿಕೃತ ದಿನಾಂಕ ಘೋಷಣೆಯಾಗಿಲ್ಲ. ಏಪ್ರಿಲ್ ಅಥವಾ ಮೇ ತಿಂಗಳ ಮಧ್ಯೆ ನಡೆಯುವ ನಿರೀಕ್ಷೆಯಿದೆ. ಈ ಲೀಗ್ಗಾಗಿ ಗುರುವಾರ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
"ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಎಲ್ಲಾ ಕೋವಿಡ್ ಭೀತಿಯ ಮಧ್ಯೆ ಯುಎಇಯಲ್ಲಿ ಐಪಿಎಲ್ ನಡೆಸಿದ ರೀತಿ ನಂಬಲಸಾಧ್ಯವಾಗಿದೆ ಎಂದಿರುವ ಅವರು, ನಾಳೆ ನಡೆಯುವ ಹರಾಜು ಪ್ರಕ್ರಿಯೆ ಒಂದು ಸಣ್ಣ ಪ್ರಮಾಣದ್ದಾಗಿದೆ. ಆದರೆ ಬಹಳಷ್ಟು ತಂಡಗಳು ಇದಕ್ಕಾಗಿ ಹೆಚ್ಚಿನ ಕೆಲಸಗಳನ್ನು ಮಾಡುತ್ತಿವೆ ಎಂದು ನಾನು ಭಾವಿಸುತ್ತೇನೆ" ಎಂದು ಗಂಗೂಲಿ ಹೇಳಿದರು.
ಐಪಿಎಲ್ ಲೀಗ್ ಅದ್ಭುತ ರೇಟಿಂಗ್‌ಗಳನ್ನು ಪಡೆದುಕೊಂಡಿದೆ. ಕಳೆದ 13 ವರ್ಷಗಳಲ್ಲಿ ವಿಶ್ವದ ಅತ್ಯುತ್ತಮವಾದ ಟೂರ್ನಿ ಎನಿಸಿಕೊಂಡಿದೆ. ಈ ವರ್ಷವೂ ಕೂಡ ದೊಡ್ಡ ನಿರೀಕ್ಷೆ ಹೊಂದಿದೆ. ಹಾಗಾಗಿ ಈ ಐಪಿಎಲ್‌ಗೆ ಪ್ರೇಕ್ಷಕರನ್ನು ಮೈದಾನಕ್ಕೆ ಕರೆತರಲು ನಾವು ಎದುರು ನೋಡುತ್ತೇವೆ. ಅದಕ್ಕಾಗಿ ನಾವು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದ್ದೇವೆ" ಎಂದು ಹೇಳಿದ್ದಾರೆ.
ನಾವು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ಗೆ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಬೇಕೆಂದು ಬಯಸಿದ್ದೆವು. ಆದರೆ ಆ ನಿರ್ಧಾರವನ್ನು ತಮಿಳುನಾಡು ಕ್ರಿಕೆಟ್ ಅಸೋಸಿಯೇಶನ್ಗೆ ಬಿಟ್ಟೆವು. ಅವರು ದೀರ್ಘಕಾಲದ ನಂತರ ತವರಿನಲ್ಲಿ ಮೊದಲ ಪಂದ್ಯ ನಡೆಯುತ್ತಿದ್ದು, ಮೊದಲ ಪಂದ್ಯ ಹೇಗೆ ನಡೆಯುವುದು ನೋಡಿ ನಂತರ 2ನೇ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದರು.
ಇದೀಗ ಗುಜರಾತ್ ಕ್ರಿಕೆಟ್ ಅಸೋಸಿಯೇಶನ್ ಕ್ರಿಕೆಟ್ಗೆ ಕೆಲವು ವಿಶೇಷತೆಗಳನ್ನು ಸೇರಿಸುತ್ತಿದೆ. ಇದು ಕೇವಲ ಆಟದೊಂದಿಗೆ ಮಾತ್ರವಲ್ಲದೆ ಆಟದ ಸುತ್ತಲೂ ಇತರ ಬಹಳಷ್ಟು ಸಂಗತಿಗಳಿವೆ. ಹಾಗಾಗಿ ಇದು ಎಲ್ಲರಿಗೂ ಉತ್ತಮ ಟೆಸ್ಟ್ ಪಂದ್ಯವಾಗಲಿದೆ ಎಂದು ಬಿಸಿಸಿಐ ಬಾಸ್ ಹೇಳಿದ್ದಾರೆ.