ಮೆಲ್ಬೋರ್ನ್ :ಆಸ್ಟ್ರೇಲಿಯಾದಲ್ಲಿ ವಿಕ್ಟೋರಿಯನ್ ಸರ್ಕಾರ ಜನಸಂದಣಿಯ ನಿರ್ಬಂಧ ಸಡಿಲಿಸಿದ ಪರಿಣಾಮ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ಗೆ ದಿನಕ್ಕೆ 30 ಸಾವಿರ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ.
ಭಾರತ ಮತ್ತು ಆಸೀಸ್ ನಡುವಿನ ಸೀಮಿತ ಓವರ್‌ಗಳ ಸರಣಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು. ಇದೀಗ ಟೆಸ್ಟ್ ಸರಣಿಗೂ ಕೂಡ ಹೆಚ್ಚು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಡಿಸೆಂಬರ್ 26 ರಿಂದ 30ರವರೆಗೆ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಈ ಮೊದಲು ದಿನಕ್ಕೆ 25,000 ಪ್ರೇಕ್ಷಕರಿಗೆ ಅವಕಾಶ ನೀಡಲಾಗಿತ್ತು. ಆದರೀಗ ಆ ಸಂಖ್ಯೆಯನ್ನು 30 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
ಡಿಸೆಂಬರ್ 17ರಿಂದ ಅಡಿಲೇಡ್‌ನಲ್ಲಿ ನಡೆಯಲಿರುವ ಅಹರ್ನಿಶಿ ಟೆಸ್ಟ್ ಪಂದ್ಯದ ಮೂಲಕ ಬಹು ನಿರೀಕ್ಷಿತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು ಪ್ರಾರಂಭವಾಗಲಿದೆ.