ಮೆಲ್ಬೋರ್ನ್: ಸುಮಾರು ಒಂದು ಲಕ್ಷ ಆಸನಗಳ ವ್ಯವಸ್ಥೆಯಿರುವ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ನಡುವಿನ ಬಾಕ್ಸಿಂಗ್ ಟೆಸ್ಟ್ನಲ್ಲಿ ಸುಮಾರು 25,000 ವೀಕ್ಷಕರಿಗೆ ಅವಕಾಶ ಮಾಡಿಕೊಡಲು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿವೆ.
ಕೋವಿಡ್ 19 ವ್ಯಾಪಕವಾಗಿದ್ದರೂ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಪ್ರೇಕ್ಷಕರನ್ನು ಕರೆ ತರಲೇಬೇಕು ಎಂದ ಹುಮ್ಮಸ್ಸಿನಲ್ಲಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸ್ಟೇಡಿಯಂನ ನಾಲ್ಕನೇ ಒಂದು ಭಾಗದ ಆಸನಗಳನ್ನು ಪ್ರೇಕ್ಷಕರಿಗೆ ಒದಗಿಸಿಕೊಡುವ ನಿರ್ಧಾರ ಮಾಡಿದೆ.
ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಕಳೆದು ಆರೇಳು ತಿಂಗಳಿಂದ ಆಸ್ಟ್ರೇಲಿಯಾದಲ್ಲಿ ಯಾವುದೇ ಕ್ರಿಕೆಟ್ ನಡೆದಿಲ್ಲ. ಇದೀಗ ಆಸ್ಟ್ರೇಲಿಯಾದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಆರಂಭವಾಗಿದೆ. ಆದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಪ್ರೇಕ್ಷಕರ ಸಹಿತ ಪಂದ್ಯ ಆಯೋಜನೆಗೆ ಚಿಂತಿಸಲಾಗುತ್ತಿದೆ. ಅದಕ್ಕಾಗಿ ವಿಕ್ಟೋರಿಯಾ ಸರ್ಕಾರ, ಎಂಸಿಜಿ ಕ್ರಿಕೆಟ್ ಕ್ಲಬ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಕೋವಿಡ್ ಸೇಫ್ ಪ್ಲಾನ್ ಸಿದ್ಧಪಡಿಸುತ್ತಿದ್ದಾರೆ.