ಕೋಲ್ಕತ್ತಾ:ಬೌಲಿಂಗ್ ಕೋಚ್ ರಣದೇಬ್ ಬೋಸ್ರನ್ನು ನಿಂದಿಸಿ ಕ್ಷಮೆ ಕೇಳಲು ಒಪ್ಪದ ಹಿರಿಯ ವೇಗಿ ಅಶೋಕ್ ದಿಂಡಾರನ್ನು ಬೆಂಗಾಲ್ ಕ್ರಿಕೆಟ್ ಬೋರ್ಡ್ ಅಸೋಸಿಯೇಷನ್ ರಣಜಿ ತಂಡದಿಂದ ಕೈಬಿಟ್ಟಿದೆ.
35 ವರ್ಷದ ವೇಗಿ ಅಶೋಕ್ ದಿಂಡಾ ಬೌಲಿಂಗ್ ಕೋಚ್ ರಣದೇಬ್ ಬೋಸ್ ಬೆಂಗಾಲ್ ತಂಡದ ನಾಯಕ ಅಭಿಮನ್ಯು ಈಶ್ವರನ್ ಅವರ ಜೊತೆ ಗುಟ್ಟಾಗಿ ಮಾತನಾಡಿದ್ದನ್ನು ನೋಡಿ ಕೋಪಗೊಂಡು ಅವರನ್ನು ನಿಂದಿಸಿದ್ದರು ಎನ್ನಲಾಗ್ತಿದೆ. ನಂತರ ಸಿಎಬಿ ಕಾರ್ಯದರ್ಶಿ ರಣದೇಬ್ ಬೋಸ್ ಬಳಿ ಕ್ಷಮೆ ಕೇಳುವಂತೆ ಹೇಳಿದರೂ, ದಿಂಡಾ ಇದಕ್ಕೊಪ್ಪದ ಕಾರಣ ಅವರ ವಿರುದ್ಧ ಮೈದಾನದಲ್ಲಿ ಅಶಿಸ್ತು ಪ್ರದರ್ಶನ ತೋರಿದ ಆರೋಪದ ಮೇಲೆ ರಣಜಿ ತಂಡದಿಂದ ಕೈಬಿಟ್ಟಿದೆ.
ಈ ಕುರಿತು ಮಾತನಾಡಿರುವ ತಂಡದ ಮುಖ್ಯ ಕೋಚ್ ಅರುಣ್ ಲಾಲ್ "ಅಶೋಕ್ ದಿಂಡ ಬೌಲಿಂಗ್ ಕೋಚ್ರನ್ನು ನಿಂದಿಸಿದ್ದಾರೆ. ಸಿಎಬಿ ಕಾರ್ಯದರ್ಶಿಗಳು ಕ್ಷಮೆ ಕೇಳುವಂತೆ ಸೂಚಿಸಿದ್ದರೂ ದಿಂಡ ಒಪ್ಪದಿರುವ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿದೆ. ಆದರೆ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ದಿಂಡರಂತಹ ವೇಗಿ ನಮ್ಮ ತಂಡಕ್ಕೆ ಅಗತ್ಯವಿತ್ತು. ಈ ಪಿಚ್ಗೆ ಅವರು ಸೂಕ್ತವಾದ ಬೌಲರ್ ಆಗಿದ್ದರು. ನಾನು ಮಂಗಳವಾರ ಬೇಗ ಮನೆಗೆ ಬಂದ ನಂತರ ಈ ಘಟನೆ ನಡೆದಿದೆ. ಇದೀಗ ನಮ್ಮ ಯೋಜನೆಯೆಲ್ಲಾ ತಲೆಕೆಳಗಾಗಿದೆ. ಹಾಗಂತ ಯಾರೂ ಅನಿವಾರ್ಯವಲ್ಲ. ಖಂಡಿತವಾಗಿಯೂ ನಾನು CAB ನಿರ್ಧಾರವನ್ನು ಬೆಂಬಲಿಸುತ್ತೇನೆ" ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಅವರು ಬೆಂಗಾಲ್ ರಣಜಿ ತಂಡದ ಪರ ಆಡಲು ನಿರಾಕರಿಸಿದ್ದರು. ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಹೆಚ್ಚು ಬೆಂಚ್ ಕಾಯ್ದಿರಿಸಿದ ಕಾರಣ ಈ ನಿರ್ದಾರ ತೆಗೆದುಕೊಂಡಿದ್ದರು. ಇದೀಗ ಅವರ ದುರ್ವರ್ತನೆಯಿಂದ ತಂಡವೇ ಅವರನ್ನು ಕೈಬಿಟ್ಟಿದೆ.
ಅಶೋಕ್ ದಿಂಡ 116 ಪ್ರಥಮ ದರ್ಜೆ ಕ್ರಿಕೆಟ್ನಿಂದ 420 ವಿಕೆಟ್ಸ್ ಪಡೆದಿದ್ದಾರೆ. ಇವರನ್ನು ತಂಡದಿಂದ ಕೈಬಿಟ್ಟಿರುವ ಸಿಎಬಿ ಸದ್ಯಕ್ಕೆ ಬದಲಿ ಆಟಗಾರನನ್ನು ಇನ್ನು ಘೋಷಿಸಿಲ್ಲ.