ನವದೆಹಲಿ: ಐಪಿಎಲ್ ಸ್ಪಾಟ್ಫಿಕ್ಸಿಂಗ್ನ ಮೂಲ ಅರ್ಜಿದಾರರಾದ ಆದಿತ್ಯ ವರ್ಮಾ 13ನೇ ಆವೃತ್ತಿಯ ಐಪಿಎಲ್ ಲೀಗ್ ಅನ್ನು ಭಾರತದಲ್ಲೇ ಆಯೋಜಿಸುವಂತೆ ಸೌರವ್ ಗಂಗೂಲಿಗೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ.
ಈಗಾಗಲೆ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ಅನ್ನು ಯುಎಇನಲ್ಲಿ ಆಯೋಜಿಸುವುದಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಆದರೆ ಆದಿತ್ಯ ವರ್ಮ ಯುಎಇ ಐಪಿಎಲ್ಗೆ ಸುರಕ್ಷಿತ ಸ್ಥಳವಲ್ಲ ಎಂದು ಹೇಳಿದ್ದು, ಭಾರತದಲ್ಲೇ ಆಯೋಜಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ ಸೆಪ್ಟೆಂಬರ್ 19 ರಿಂದ ನಡೆಯಲಿದ್ದು, ಆಡಳಿತ ಮಂಡಳಿ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಆದರೆ ವರ್ಮಾ ಐಪಿಎಲ್ ಅನ್ನು ಭಾರತದಲ್ಲಿ ಏಕೆ ನಡೆಸಬೇಕು ಎಂಬುದಕ್ಕೆ ಕಾರಣ ನೀಡಿ ದಾದಾಗೆ ಪತ್ರ ಬರೆದಿದ್ದಾರೆ.
"ದುಬೈ ರಗ್ಬಿ ಸೆವೆನ್ಸ್ ಯುಎಇನಲ್ಲಿ ಅತಿದೊಡ್ಡ ಇವೆಂಟ್. ಕೋವಿಡ್ 19 ಕಾರಣ ನವೆಂಬರ್‌ನಲ್ಲಿ ಆಯೋಜನೆಯಾಗಿದ್ದ ಆ ಟೂರ್ನಿಯನ್ನೇ ಅಲ್ಲಿ ಮುಂದೂಡಲಾಗಿದೆ. ನವೆಂಬರ್‌ನಲ್ಲಿ ನಡೆಯವ ಆ ಟೂರ್ನಿಯೇ ರದ್ದಾಗಿರುವಾಗ , ಅದಕ್ಕೂ ಮುನ್ನ ಅದೇ ಸ್ಥಳದಲ್ಲಿ ಐಪಿಎಲ್ ಹೇಗೆ ಸಾಧ್ಯ? ಹಾಗಾಗಿ ಭಾರತದಲ್ಲಿ ಐಪಿಎಲ್ ಆಯೋಜಿಸುವುದೇ ಸೂಕ್ತ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಪತ್ರ ಬರೆದಿರುವುದಾಗಿ ಅವರು ವರ್ಮಾ ತಿಳಿಸಿದ್ದಾರೆ.
ಇನ್ನು ಭಾರತದಲ್ಲಿ ಸುಮಾರು 5 ಲಕ್ಷಕ್ಕಿಂತ ಹೆಚ್ಚು ಸಕ್ರಿಯ ಕೊರೊನ ಪ್ರಕರಣಗಳಿವೆ. ಈಗಾಗಲೆ 36, 000ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಆದರೂ ವರ್ಮಾ ಲಕ್ಷಕ್ಕೂ ಕಡಿಮೆಯಿರುವ ಯುಎಇಯ ಮೂರು ವಿಭಿನ್ನ ಕ್ರೀಡಾಂಗಣಗಳಲ್ಲಿ ಐಪಿಎಲ್ ನಡೆಸುವುದಕ್ಕಿಂತ ಮುಂಬೈನಂತಹ ನಗರದಲ್ಲಿ ಬಯೋ ಸೆಕ್ಯೂರ್ ವಾತಾವರಣ ನಿರ್ಮಾಣ ಮಾಡಿ ಐಪಿಎಲ್ ಆಯೋಜಿಸುವುದು ಸೂಕ್ತ ಎಂದು ಹೇಳಿದ್ದಾರೆ.
ಭಾರತದಲ್ಲೇ ಐಪಿಎಲ್ ಆಯೋಜನೆಗೊಂಡರೆ ವಿದೇಶಿ ಆಟಗಾರರು ಬಾಗವಹಿಸಲು ಹಿಂದೇಟು ಹಾಕಬಹುದು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸದ ಅವರು, ವಿದೇಶಿ ಆಟಗಾರರು ಬಾರದಿದ್ದರೆ ಅವರ ಬದಲು ಸ್ವದೇಶಿ ಆಟಗಾರರನ್ನೇ ಬಳಿಸಿಕೊಂಡು ಟೂರ್ನಿಯನ್ನು ನಡೆಸಬಹುದು ಎಂದು ಉತ್ತರಿಸಿದ್ದಾರೆ.
ಕೋವಿಡ್ 19 ನಿಂದ ಬಳಲಿರುವ ಭಾರತೀಯರಿಗೆ ಐಪಿಎಲ್ ಅವರ ಮನಸ್ಥಿತಿಯನ್ನು ಬದಲಾಯಿಸಲು ನೆರವಾಗುತ್ತದೆ. ಒಂದು ವೇಳೆ ನಾವು ಭಾರತದಲ್ಲಿ ಈ ಬಾರಿ ಐಪಿಎಲ್ ಅನ್ನು ಯಶಸ್ವಿಯಾಗಿ ನಡೆಸಿದರೆ, ಇದೊಂದು ದೊಡ್ಡ ಸಾಧನೆಯಗುತ್ತದೆ ಎಂದು ವರ್ಮಾ ಅಭಿಪ್ರಾಯಪಟ್ಟಿದ್ದಾರೆ.