ಲಂಡನ್: ಭಾರತ ಕಂಡ ಸ್ಫೋಟಕ ಆಟಗಾರ ವಿರೇಂದ್ರ ಸೆಹ್ವಾಗ್ ಶ್ರೀಲಂಕಾ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸಿರುವುದಕ್ಕೆ ಅಭಿನಂದಿಸಿದ್ದು, ಈ ಫಲಿತಾಂಶ ವಿಶ್ವಕಪ್ಗೆ ಜೀವ ತಂದಿದೆ ಎಂದಿದ್ದಾರೆ.
ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಇಂಗ್ಲೆಂಡ್ 233 ರನ್ ಗುರಿ ತಲುಪಲಾಗದೇ ಲಂಕಾ ವಿರುದ್ಧ 20 ರನ್ಗಳ ಸೋಲುನುಭವಿಸಿತ್ತು. ವಿಶ್ವಕಪ್ನ ಬಹುಪಾಲು ಪಂದ್ಯಗಳು ಏಕಪಕ್ಷೀಯವಾಗಿ ನಡೆಯುತ್ತಿದ್ದು, ಬಲಿಷ್ಠ ತಂಡಗಳಾದ ಇಂಗ್ಲೆಂಡ್, ಆಸ್ಟ್ರೇಲಿಯಾ, ಭಾರತ ಹಾಗೂ ನ್ಯೂಜಿಲ್ಯಾಂಡ್ ಸೆಮಿಫೈನಲ್ ತಲುಪಲಿವೆ ಎಂದು ನಿರೀಕ್ಷಿಸಲಾಗಿತ್ತು.
ಇಂಗ್ಲೆಂಡ್ ತಂಡ ಫೈನಲ್ ಪ್ರವೇಶಿಸುತ್ತದೆ ಎಂದು ಕ್ರಿಕೆಟ್ ತಜ್ಞರು ಭವಿಷ್ಯ ನುಡಿಯುತ್ತಿರುವಾಗಲೇ ಶ್ರೀಲಂಕಾದಂತಹ ಸಾಧಾರಣ ತಂಡದ ವಿರುದ್ಧವೇ ಸೋಲನುಭಿಸಿದೆ. ಇಂಗ್ಲೆಂಡ್ ತನ್ನ ಮುಂದಿನ ಪಂದ್ಯಗಳಲ್ಲಿ ಭಲಿಷ್ಠ ತಂಡಗಳಾದ ನ್ಯೂಜಿಲ್ಯಾಂಡ್, ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧ ಆಡಲಿರುವುದರಿಂದ ಟೂರ್ನಿಯಲ್ಲಿ ರೋಚಕ ಪಂದ್ಯಗಳು ನಡೆಯಲಿವೆ ಎಂಬರ್ಥದಲ್ಲಿ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಈಗಾಗಲೇ 10 ಅಂಕ ಹೊಂದಿರುವ ಆಸ್ಟ್ರೇಲಿಯಾಗೆ ಇನ್ನೊಂದು ಗೆಲುವು ಸಿಕ್ಕರೆ ಸಾಕು ಸೆಮಿಫೈನಲ್ ಪ್ರವೇಶಿಸಲಿದೆ. ಇನ್ನು ನ್ಯೂಜಿಲ್ಯಾಂಡ್ ಕೂಡ ಒಂದು ಪಂದ್ಯ ಗೆದ್ದರೆ ಸಾಕು ರನ್ ರೇಟ್ ಆಧಾರದ ಮೇಲೆ ಸೆಮಿಫೈನಲ್ ಖಚಿತಗೊಳಿಸಿಕೊಳ್ಳಲಿದೆ. ಇನ್ನು ಭಾರತ ತಂಡದ ಬಳಿ ಕೂಡ 7 ಅಂಕಗಳಿದ್ದು, ಟೂರ್ನಿಯಲ್ಲಿ ತನ್ನ ಮುಂದಿನ ಪಂದ್ಯಗಳಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಇಂಗ್ಲೆಂಡ್ ಹಾಗೂ ವಿಂಡೀಸ್ ವಿರುದ್ಧ ಸೆಣಸಲಿದೆ. ಇದರಲ್ಲಿ ಇಂಗ್ಲೆಂಡ್ ವಿರುದ್ಧ ಬಿಟ್ಟರೆ ಇನ್ನೆಲ್ಲಾ ಪಂದ್ಯಗಳಲ್ಲೂ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಇದೀಗ ಶ್ರೀಲಂಕಾ ಕೂಡ ಸೆಮಿಫೈನಲ್ ರೇಸ್ಗೆ ಎಂಟ್ರಿ ಕೊಟ್ಟಿದೆ. ಇದರ ಜೊತೆ ಬಾಂಗ್ಲಾದೇಶ ತಂಡ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಟೂರ್ನಿ ಖಂಡಿತ ಕೂತೂಹಲ ಘಟ್ಟ ತಲುಪಲಿದೆ. ಒಟ್ಟಿನಲ್ಲಿ ಏಕಮುಖವಾಗಿ ಸಾಗುತ್ತಿದ್ದ ವಿಶ್ವಕಪ್ ಟೂರ್ನಮೆಂಟ್ಗೆ ಲಂಕಾ ತಂಡ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ರೋಚಕ ತಿರುವು ತಂದು ಕೊಟ್ಟಿದೆ.