ಲಂಡನ್: ಈ ವರ್ಷ ನಡೆಯಲಿರುವ ಕ್ರಿಕೆಟ್ ಹಬ್ಬ ವಿಶ್ವಕಪ್ಗೆ ಇನ್ನು 100 ದಿನಗಳಷ್ಟೇ ಬಾಕಿ ಇದೆ. ಮೇ 30 ರಿಂದ ಇಂಗ್ಲೆಂಡ್ ಹಾಗೂ ವೇಲ್ಸ್ನಲ್ಲಿ ಕ್ರಿಕೆಟ್ ಜಾತ್ರೆ ಆರಂಭವಾಗಲಿದೆ. ಈ ಮೆಗಾ ಇವೆಂಟ್ಗೆ ಭಾರಿ ಸಿದ್ಧತೆಗಳು ನಡೆಯುತ್ತಿವೆ.
ಈ ಬಾರಿ ವಿಶ್ವಕಪ್ನಲ್ಲಿ ಯಾವೆಲ್ಲ ಆಟಗಾರರು ಹಾಗೂ ತಂಡಗಳು ಮಿಂಚಲಿವೆ ಎನ್ನುವುದನ್ನ ನೋಡಲು ವೀಕ್ಷಕರು ಮತ್ತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಿದೆ ತಂಡಗಳ ಭವಿಷ್ಯ ಹಾಗೂ ಬಲಾಬಲ.
ಇಂಗ್ಲೆಂಡ್: 1975 ರಲ್ಲಿ ಕ್ರಿಕೆಟ್ ವಿಶ್ವಕಪ್ ಆರಂಭವಾದಾಗಿನಿಂದ ಇದುವರೆಗೂ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿಲ್ಲ. ಮೂರು ಬಾರಿ ಫೈನಲ್ ತಲುಪಿದರೂ ಫೈನಲ್ ಗೆಲುವಿನ ಕನಸು ಈಡೇರಿಲ್ಲ. ಇನ್ನು ಐದು ವಿಶ್ವಕಪ್ಗಳಲ್ಲಿ ಬ್ರಿಟನ್ ತಂಡ ಗ್ರೂಪ್ ಸ್ಟೇಜ್ಗಳಿಂದಲೇ ಔಟ್ ಆಗಿದೆ. ಇದೇನೇ ಇರಲಿ ಏಕದಿನ ಕ್ರಿಕೆಟ್ನಲ್ಲಿ ಇಯಾನ್ ಮೊರ್ಗನ್ ಟೀಂ ನಂಬರ್ ಒನ್ ಸ್ಥಾನದಲ್ಲಿದೆ. ಇನ್ನು ಈ ಬಾರಿಯ ವಿಶ್ವಕಪ್ ಅವರದ್ದೇ ನೆಲದಲ್ಲಿ ನಡೆಯುತ್ತಿರುವುದು ಪ್ಲಸ್ ಪಾಯಿಂಟ್. ಇನ್ನು ಜೋ ರೂಟ್ ಆಂಗ್ಲ ಪಡೆಯ ಗೇಮ್ ಚೇಂಜರ್ ಎಂದೇ ಬಣ್ಣಿಸಲಾಗುತ್ತಿದೆ. ಆರು ಏಕದಿನ ಶತಕ ಬಾರಿಸಿರುವ ರೂಟ್ 117 ಸ್ಟ್ರೈಕಿಂಗ್ ರೇಟ್ನಲ್ಲಿ ರನ್ ಬಾರಿಸಿದ್ದಾರೆ.
ಇಂಡಿಯಾ:ಒನ್ ಡೇ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ 2 ನೇ ಸ್ಥಾನದಲ್ಲಿರುವ ಭಾರತ ತಂಡ, ನಾಯಕ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸರಣಿ ಗೆದ್ದಿರುವ ಟೀಂ ಇಂಡಿಯಾ ಹುಮ್ಮಸ್ಸಿನಲ್ಲಿದೆ. ಅಷ್ಟೇ ಅಲ್ಲ, 2018 ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ 5-1, ವೆಸ್ಟ್ ಇಂಡೀಸ್ (3-1) ಮತ್ತು ಏಷ್ಯಾ ಕಪ್ ಗೆಲುವು ಭಾರತ ಏಕದಿನ ಪಂದ್ಯಗಳಲ್ಲಿ ಬಲಾಢ್ಯ ಎಂಬುದನ್ನು ತೋರಿಸಿದೆ.
ವಿಶೇಷ ಎಂದರೆ ವಿರಾಟ್ ಕೊಹ್ಲಿ ಅವರೇ ಗೇಮ್ ಚೇಂಜರ್ ಆಟಗಾರರಾಗಿದ್ದಾರೆ. ಇನ್ನು ಬೌಲಿಂಗ್ ವಿಭಾಗಕ್ಕೆ ಬಂದರೆ ಕುಲ್ದೀಪ್ ಯಾದವ್ ಲೀಡ್ ರೋಲ್ ಮಾಡಲಿದ್ದಾರೆ. 24 ವರ್ಷದ ಯಾದವ್ 19 ಏಕದಿನ ಕ್ರಿಕೆಟ್ನಲ್ಲಿ 45 ವಿಕೆಟ್ ಪಡೆದು ತಮ್ಮ ಪರಾಕ್ರಮ ಮೆರೆದಿದ್ದಾರೆ.
ಪಾಕಿಸ್ತಾನ: ಈ ತಂಡವನ್ನ ಯಾವುದೇ ಕಾರಣಕ್ಕೂ ಹೀಗೆ ಅಂತಾ ಪ್ರೆಡಿಕ್ಟ್ ಮಾಡಲು ಸಾಧ್ಯವಾಗಿಲ್ಲ. ಎರಡು ವರ್ಷಗಳ ಹಿಂದೆ ಪಾಕಿಸ್ತಾನ ಚಾಂಪಿಯನ್ ಟ್ರೋಫಿ ಗೆದ್ದುಕೊಂಡಿತ್ತು. ನಾಯಕ ಸರ್ಫರಾಜ್ ಅಹಮ್ಮದ್ ನೇತೃತ್ವದ ತಂಡದಲ್ಲಿ ಕೆಲ ಅದ್ಭುತ ಪ್ರತಿಭೆಗಳಿವೆ. ಮೊಹಮ್ಮದ್ ಅಮಿರ್ನಿಂದ ಹಿಡಿದು ಉಸ್ಮಾನ್ ಶಿನ್ವಾರಿ ಹಾಗೂ ಹಸನ್ ಅಲಿ ವರೆಗೂ ಉತ್ತಮ ಆಟಗಾರರಿದ್ದಾರೆ. ಆದರೆ ಏಕದಿನದಲ್ಲಿ ಸ್ಥಿರವಾದ ಆಟ ಕಂಡು ಬಂದಿಲ್ಲ.
1992 ರಲ್ಲಿ ವಿಶ್ವಕಪ್ ಎತ್ತಿ ಹಿಡಿದ ಪಾಕ್ ತಂಡದಲ್ಲಿ ಈಗ ಬಾಬರ್ ಅಜಂ ಗೇಮ್ ಚೇಂಜ ಮಾಡಬಲ್ಲ ಆಟಗಾರನಾಗಿದ್ದಾರೆ. ಸರಾಸರಿ 51ರಂತೆ ರನ್ ಬಾರಿಸುತ್ತಿರುವ ಅಜಂ ಎಂಟು ಸೆಂಚುರಿ ಹಾಗೂ 10 ಅರ್ಧ ಶತಕ ಬಾರಿಸಿದ್ದಾರೆ.
ದಕ್ಷಿಣ ಆಫ್ರಿಕಾ: ಲೀಗ್ ಮ್ಯಾಚ್ಗಳಲ್ಲಿ ಸೂಪರ್ ಆಟ... ಸೆಮಿಫೈನಲ್ನಲ್ಲಿ ಮುಗ್ಗರಿಸುವ ಆಟ. ಇದು 1992ರಿಂದ ದಕ್ಷಿಣ ಆಫ್ರಿಕಾ ತಂಡದ ನತದೃಷ್ಟದ ಆಟ. ಈ ಬಾರಿಯಾದರೂ ದಕ್ಷಿಣ ಆಫ್ರಿಕಾ ಆಗುತ್ತಾ ಚಾಂಪಿಯನ್ ಎಂದು ವಿಶ್ವಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇನ್ನು ಸ್ಟಾರ್ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಹಾಗೂ ವೇಗದ ಬೌಲರ್ ಮಾರ್ನೆ ಮೊರ್ಕೆಲ್ ನಿವೃತ್ತಿ ಘೋಷಿಸಿದ್ದಾರೆ. 2018 ರಲ್ಲಿ ದಕ್ಷಿಣ ಆಫ್ರಿಕಾ 12 ಪಂದ್ಯಗಳನ್ನ ಗೆಲುವು ಸಾಧಿಸಿದರೆ, 10 ಸೋಲುಗಳನ್ನ ಅನುಭವಿಸಿದೆ.
ಈ ನಡುವೆಯೂ ಡೆವಿಡ್ ಮಿಲ್ಲರ್ ದಕ್ಷಿಣ ಆಫ್ರಿಕಾದ ಗೇಮ್ ಚೇಂಜರ್ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ವಿರುದ್ಧದ ಟಿ-20 ಸರಣಿಯಲ್ಲಿ ಮಿಲ್ಲರ್ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಹೊರಹೊಮ್ಮಿದ್ದರು. ಇನ್ನು ಬೌಲಿಂಗ್ನಲ್ಲಿ ಲುಂಗಿ ನಿಗಿದಿ ಕಮಾಲ್ ಮಾಡ್ತಿದ್ದಾರೆ.
ವೆಸ್ಟ್ ಇಂಡೀಸ್: 1975 ಹಾಗೂ 79 ರ ವಿಶ್ವಕಪ್ ವಿಜೇತ ತಂಡ ವೆಸ್ಟ್ ಇಂಡೀಸ್ ಆ ಬಳಿಕ ಮತ್ತೆ ವರ್ಲ್ಡ್ ಕಪ್ ಎತ್ತಿ ಹಿಡಿಯಲು ವಿಫಲವಾಗಿದೆ. ಆದರೆ, ಇತ್ತೀಚೆಗೆ ತನ್ನದೇ ನೆಲದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದು ಬೀಗಿದೆ. 2011 ಹಾಗೂ 2015 ರಲ್ಲಿ ವೆಸ್ಟ್ ಇಂಡೀಸ್ ಕ್ವಾರ್ಟರ್ ಫೈನಲ್ ತಲುಪಲು ವಿಂಡೀಸ್ ವಿಫಲವಾಗಿತ್ತು. ಇನ್ನು ತಂಡದ ಇತ್ತೀಚಿನ ಪ್ರದರ್ಶನಕ್ಕೆ ಬರೋದಾದರೆ, 2018 ರಲ್ಲಿ ತಾನಾಡಿದ 18 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ 8 ಪಂದ್ಯಗಳನ್ನ ಮಾತ್ರವೇ ಗೆದ್ದುಕೊಂಡಿದೆ. 2017 ರಲ್ಲಿ ಕೆರಿಬಿಯನ್ನರು ತಾವಾಡಿದ 22 ಪಂದ್ಯಗಳಲ್ಲಿ ಕೇವಲ 3 ಮ್ಯಾಚ್ಗಳನ್ನಷ್ಟೇ ಗೆದ್ದುಕೊಂಡಿದ್ದರು.
ಈಗ ಕ್ರಿಸ್ ಗೇಲ್ 40 ವರ್ಷವಾಗಿದೆ. ಹೀಗಾಗಿ ಈ ಬಾರಿ ಆತ ಕಮಾಲ್ ಮಾಡ್ತಾನಾ ಕಾದುನೋಡಬೇಕಿದೆ. ಆದರೆ 22 ವರ್ಷದ ಹೆಟ್ಮೇಯರ್ ಅದ್ಭುತ ಫಾರ್ಮ್ನಲ್ಲಿದ್ದು, ಗೇಮ್ ಚೇಂಜರ್ ಆಗುವ ಎಲ್ಲ ಲಕ್ಷಣಗಳಿವೆ.
ಆಸ್ಟ್ರೇಲಿಯಾ: ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಈ ಸಲದ ವಿಶ್ವಕಪ್ನಲ್ಲಿ ಮಂಕಾದಂತೆ ಕಾಣುತ್ತಿದೆ. ಬಾಲ್ ಟ್ಯಾಂಪರಿಂಗ್ ವಿವಾದಕ್ಕೆ ಸಿಲುಕಿದ ಮೇಲೆ ತಂಡದ ಪ್ರದರ್ಶನ ಸಂಪೂರ್ಣ ಕೆಳಕ್ಕೆ ಇಳಿದಿದೆ. ಸೋಲುಗಳ ಮೇಲೆ ಸೋಲು ಅನುಭವಿಸಿ ಹಿಂದಿನ ಖದರ್ ಕಳೆದುಕೊಂಡಿದೆ. ಆದರೂ ಆಸ್ಟ್ರೇಲಿಯಾ ತಂಡವನ್ನ ಕಡೆಗಣಿಸುವಂತಿಲ್ಲ. ಯಾಕೆಂದರೆ ನಿಷೇಧಕ್ಕೆ ಒಳಗಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ವಿಶ್ವಕಪ್ ಟೀಂ ಸೇರಿಕೊಳ್ಳಲಿದ್ದಾರೆ.