ಧರ್ಮಶಾಲಾ:ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡ ಬಳಿಕ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಸವಾಲು ಎದುರಿಸಲಿದ್ದು, ನಾಳೆಯಿಂದ ಆರಂಭಗೊಳ್ಳಲಿರುವ ಮೂರು ಏಕದಿನ ಪಂದ್ಯಗಳ ಕ್ರಿಕೆಟ್ ಸರಣಿಯಲ್ಲಿ ಗೆಲುವಿನ ಉತ್ಸಾಹದೊಂದಿಗೆ ಕಣಕ್ಕಿಳಿಯಲಿದೆ.
ಗಾಯಗೊಂಡು ತಂಡದಿಂದ ಹೊರಗುಳಿದಿದ್ದ ಆರಂಭಿಕ ಶಿಖರ್ ಧವನ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಹಾರ್ದಿಕ್ ಪಾಂಡ್ಯ ಹಾಗೂ ವೇಗಿ ಭುವನೇಶ್ವರ್ ಕುಮಾರ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದು, ಈಗಾಗಲೇ ನೆಟ್ಸ್ನಲ್ಲಿ ಕಠಿಣ ಅಭ್ಯಾಸ ನಡೆಸಲಾಗುತ್ತಿದೆ.
ಸುಮಾರು ಏಳು ತಿಂಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಡಿ.ವೈ.ಪಾಟೀಲ್ ಟಿ-20 ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದು ಕೊಹ್ಲಿ ಪಡೆಗೆ ಆನೆ ಬಲ ಬಂದಂತಾಗಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಪಡೆ ಸಂಪೂರ್ಣವಾಗಿ ವಿಫಲಗೊಂಡಿರುವ ಕಾರಣ ಇದೀಗ ತವರು ನೆಲದಲ್ಲಿ ರನ್ ಮಳೆ ಹರಿಸುವುದು ಬಹುತೇಕ ಖಚಿತವಾಗಿದೆ.
ಆದರೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡು ಭಾರತಕ್ಕೆ ಆಗಮಿಸಿರುವ ಕ್ವಿಂಟನ್ ಡಿಕಾಕ್ ಪಡೆ ಕೂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದ್ದು, ಕೊಹ್ಲಿ ಪಡೆಗೆ ಸಖತ್ ತಿರುಗೇಟು ನೀಡುವ ಇರಾದೆಯಲ್ಲಿದೆ. ಇನ್ನು ಟೀಂ ಇಂಡಿಯಾದಲ್ಲಿ ಯಂಗ್ ಪ್ಲೇಯರ್ಸ್ಗಳಿಗೆ ಮಣೆ ಹಾಕಿದ್ದು, ನಾಳೆಯ ಪಂದ್ಯದಲ್ಲಿ ಯಾರಿಗೆಲ್ಲ ಅವಕಾಶ ಸಿಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.