ದುಬೈ:ಐಸಿಸಿ ರ್‍ಯಾಂಕಿಂಗ್ ಪಟ್ಟಿ ನವೀಕರಿಸಿದ್ದು, ಏಕದಿನ ಅಂಕ ಪಟ್ಟಿಯಲ್ಲಿ ಮತ್ತೆ ಫಾರ್ಮ್ಗೆ ಮರಳಿರುವ ವಿರಾಟ್ ಕೊಹ್ಲಿ ಅವರ ರ್ಯಾಂಕಿಂಗ್ನಲ್ಲಿ ಏರಿಕೆ ಕಂಡಿದೆ. ಅಲ್ಲದೇ ಬೌಲರ್ ಸಿರಾಜ್ ಅವರು ಕೂಡ ಮೆಲಕ್ಕೇರಿದ್ದಾರೆ. ಲಂಕಾ ಸರಣಿಯಲ್ಲಿ ಎರಡು ಶತಕ ದಾಖಲಿಸಿ ಕೊಹ್ಲಿ ವಿರಾಟ ರೂಪದ ದರ್ಶನ ನೀಡಿದ್ದರೆ, 9 ವಿಕೆಟ್ ಪಡೆದು ಸಿರಾಜ್ ಮಿಂಚಿದ್ದರು.
ಡಿಸೆಂಬರ್ ಕೊನೆಯಲ್ಲಿ ಬಾಂಗ್ಲಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಶತಕ ಗಳಿಸಿದ್ದರು. ಇದಾದ ನಂತರ ಈ ವರ್ಷದ ಮೊದಲ ಏಕದಿನ ಸರಣಿ ಲಂಕಾ ವಿರುದ್ಧ ತವರು ನೆಲದಲ್ಲಿ ನಡೆದದ್ದರಲ್ಲಿ ಮೊದಲ ಮತ್ತು ಎರಡನೇ ಪಂದ್ಯದಲ್ಲಿ ಶತಕ ಗಳಿಸಿದ್ದರು. ಸರಣಿಯ ಅತೀ ಹೆಚ್ಚು ರನ್ ಗಳಿಕೆ ಮಾಡಿದವರಾಗಿ ಹೊರಹೊಮ್ಮಿದ್ದರು.
ವಿರಾಟ್ ಕೊಹ್ಲಿ ಮೂರು ವರ್ಷ ಫಾರ್ಮ್ನ ಕೊರತೆ ಎದುರಿಸಿದ್ದರು. ಸತತ ಬ್ಯಾಟಿಂಗ್ ವೈಫಲ್ಯಕಂಡಿದ್ದ ಅವರು ಹಲವಾರು ಟೀಕೆಗೆ ಗುರಿಯಾಗಿದ್ದರು. ಹೋದ ವರ್ಷ ನಡೆದ ಟಿ20 ವಿಶ್ವಕಪ್ ನಲ್ಲಿ ಮರಳಿ ಬ್ಯಾಟಿಂಗ್ ಲಯಕ್ಕೆ ಬಂದರು. ಡಿಸೆಂಬರ್ ಮತ್ತು ಜನವರಿಯಲ್ಲಿ ಈ ವರೆಗೆ ನಾಲ್ಕು ಏಕದಿನ ಪಂದ್ಯಗಳನ್ನಾಡಿದ ವಿರಾಟ್ ಮೂರು ಶತಕ ದಾಖಲಿಸಿದ್ದಾರೆ.
ಲಂಕಾ ವಿರುದ್ಧ ಪಂದ್ಯದಲ್ಲಿ ಸರಣಿ ಶ್ರೇಷ್ಠ: ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 113 ರನ್ ಕಲೆಹಾಕಿದ್ದರು. ಎರಡನೇ ಪಂದ್ಯದಲ್ಲಿ 4 ರನ್ಗೆ ಔಟ್ ಆಗಿದ್ದರು. ಕೊನೆಯ ಪಂದ್ಯದಲ್ಲಿ 166 ರನ್ ದಾಖಲಿಸಿದ್ದ ವಿರಾಟ್, ಮೂರು ಪಂದ್ಯಗಳಿಂದ 283 ರನ್ಗಳಿಸಿ ಟಾಪ್ ರನ್ನರ್ ಆಗಿದ್ದರು. ಎರಡು ಶತಕದ ಜೊತೆಗೆ ಹೆಚ್ಚು ರನ್ ಗಳಿಸಿದ ಕೊಹ್ಲಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಗಿತ್ತು. ಇಂದು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ 8 ರನ್ಗೆ ಕೊಹ್ಲಿ ವಿಕೆಟ್ ಒಪ್ಪಿಸಿದ್ದಾರೆ.
ನಾಲ್ಕನೇ ಸ್ಥಾನಕ್ಕೇರಿದ ವಿರಾಟ್: 750 ಅಂಕಗಳಿಸಿ ವಿರಾಟ್ ಕೊಹ್ಲಿ ಐಸಿಸಿ ರ್ಯಾಕಿಂಗ್ನ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಲಂಕಾದ ಪಂದ್ಯಗಳ ಫಾರ್ಮ್ನ್ನು ರನ್ ಮಷಿನ್ ಮುಂದುವರೆಸಿದರೆ ಎರಡನೇ ಸ್ಥಾನಕ್ಕೆ ಏರಲಿದ್ದಾರೆ. ರ್ಯಾಂಕಿಂಗ್ನ ಮೊದಲ ಸ್ಥಾನದಲ್ಲಿ 887 ಅಂಕದೊಂದಿಗೆ ಪಾಕಿಸ್ತಾನದ ಆಟಗಾರ ಬಾಬರ್ ಅಜಂ ಇದ್ದಾರೆ. ಎರಡು ಮತ್ತು ಮೂರರಲ್ಲಿ ದಕ್ಷಿಣ ಆಫ್ರಿಕಾದ ಡುಸೆನ್ (766) ಮತ್ತು ಡಿ ಕಾಕ್ (759) ಇದ್ದಾರೆ. ವಿರಾಟ್ ಮತ್ತು ಎಡನೇ ಸ್ಥಾನದ ಬ್ಯಾಟರ್ ನಡುವೆ ಕೇವಲ 16 ಅಂಕಗಳ ವ್ಯತ್ಯಾಸ ಮಾತ್ರ ಇದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಶತಕದ ಆಟ ಬಂದರೆ ಕೊಹ್ಲಿ ಟಾಪ್ 2 ನೇ ಸ್ಥಾನಕ್ಕೆ ಏರಲಿದ್ದಾರೆ. 10 ನೇ ಸ್ಥಾನದಲ್ಲಿ ನಾಯಕ ರೋಹಿತ್ ಶರ್ಮಾ ಇದ್ದಾರೆ.
ಸಿರಾಜ್ ಸ್ಥಾನದಲ್ಲಿ ಏರಿಕೆ: ಲಂಕಾ ವಿರುದ್ಧದ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ಮುಂದುವರಿಸಿರುವ ಮೊಹಮ್ಮದ್ ಸಿರಾಜ್ ಒಡಿಐ ಬೌಲಿಂಗ್ ರ್‍ಯಾಂಕಿಂಗ್ ನಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಸಿಂಹಳೀಯರ ವಿರುದ್ಧ ಮೂರು ಏಕದಿನ ಪಂದ್ಯಗಳಲ್ಲಿ 9 ವಿಕೆಟ್ ಉರುಳಿಸಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು. ಮೊಹಮ್ಮದ್ ಸಿರಾಜ್ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಗಳಿಸಿದ ಬೌಲರ್ ಎನಿಸಿಕೊಂಡಿದ್ದರು. ಮೊದಲ ಪಟ್ಟಕ್ಕೇರಲು 45 ಅಂಕಗಳ ಹಿಂದೆ ಇರುವ ಸಿರಾಜ್, ನ್ಯೂಜಿಲ್ಯಾಂಡ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಕಿವೀಸ್ನ ಟ್ರೆಂಟ್ ಬೌಲ್ಟನ್ನು ಕೆಳಕ್ಕೆ ತಳ್ಳಿ ಟಾಪ್ ಶ್ರೇಯಾಂಕ ಗಳಿಸಲಿದ್ದಾರೆ.
ಇದನ್ನೂ ಓದಿ:ನಾಳೆಯಿಂದ ಬ್ಲಾಕ್ಕ್ಯಾಪ್ಸ್ ಮತ್ತು ಬ್ಲೂಬಾಯ್ಸ್ ಕದನ: ನ್ಯೂಜಿಲ್ಯಾಂಡ್ ಸರಣಿಯಿಂದಲೇ ಅಯ್ಯರ್ ಔಟ್