ರಾಯ್ಪುರ(ಛತ್ತೀಸ್ಗಢ):ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಸ್ಪಿನ್ನರ್ ಯಜುವೇಂದ್ರ ಚಹಲ್ ಕ್ರಿಕೆಟ್ ಮತ್ತು ಆಟಗಾರರ ಬಗ್ಗೆ ಒಂದಲ್ಲಾ ಒಂದು ಮಾಹಿತಿ ನೀಡುವ ವಿಡಿಯೋವನ್ನು ಹಂಚಿಕೊಳ್ಳುತ್ತಾರೆ. ಛತ್ತೀಸ್‌ಗಢದ ರಾಯಪುರದಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯಕ್ಕೂ ಮೊದಲು ಚಹಲ್ ಕ್ರೀಡಾಂಗಣದಲ್ಲಿನ ಆಟಗಾರರ ಡ್ರೆಸ್ಸಿಂಗ್ ರೂಮ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ನಲ್ಲಿ ಹರಿಬಿಟ್ಟಿದೆ.
ಚಹಲ್ ಟಿವಿ ವಿಡಿಯೋದಲ್ಲಿ ಡ್ರೆಸ್ಸಿಂಗ್ ರೂಮಿನ ಬಗ್ಗೆ ತೋರಿಸಿರುವ ಸ್ಪಿನ್ನರ್, ಅಲ್ಲಿನ ಆಸನ, ಭೋಜನ ವಿಭಾಗ, ಆಟಗಾರರಿಗೆ ಇರುವ ಸವಲತ್ತುಗಳ ಬಗೆಗಿನ ಮಾಹಿತಿಯನ್ನು ಹಂಚಿಕೊಡಿದ್ದಾರೆ. ಹೊರಭಾಗದಿಂದ ವಿಡಿಯೋ ಆರಂಭಿಸುವ ಚಹಲ್, ಡ್ರೆಸ್ಸಿಂಗ್ ರೂಮ್ ಅನ್ನು ಪ್ರವೇಶಿಸಿದ ನಂತರ, ವಿಶಾಲವಾದ ರೂಮಿನ ಬಗ್ಗೆ ಮಾಹಿತಿ ನೀಡುತ್ತಾ ಸಾಗುತ್ತಾರೆ. ತುಂಬಾ ಆರಾಮದಾಯಕವಾದ ಆಸನವಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ನಂತರ ಉಪನಾಯಕ ಹಾರ್ದಿಕ್ ಪಾಂಡ್ಯ ಮೊದಲ ಸಾಲಿನಲ್ಲಿ ಇರುವ ಆಸನಗಳ ಬಗ್ಗೆ ತಿಳಿಸುತ್ತಾರೆ.
ಬಳಿಕ ಅಲ್ಲಿದ್ದ ಮಸಾಜ್ ಟೇಬಲ್ ಬಗ್ಗೆಯೂ ಮಾಹಿತಿ ನೀಡಿ, ಆಟಗಾರರಿಗೆ ಸುಸ್ತಾದಾಗ ಆಯಾಸ ದೂರ ಮಾಡಲು ಅವರಿಗೆ ಫಿಸಿಯೋಗಳು ಮಸಾಜ್ ನೀಡುತ್ತಾರೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. ಡ್ರೆಸ್ಸಿಂಗ್ ರೂಮ್ ನಂತರ, ಭೋಜನ ವಿಭಾಗದ ಬಗ್ಗೆಯೂ ಪರಿಚಯಿಸುವ ಚಹಲ್, ನಾನ್, ಸ್ಟೀಮ್ ರೈಸ್, ಜೀರಾ ರೈಸ್, ದಾಲ್ ಟೊಮ್ಯಾಟೊ, ಆಲೂ ಜೀರಾ, ಪನ್ನೀರ್ ಟೊಮ್ಯಾಟೊ, ಫ್ರೈಡ್ ರೈಸ್ ಸೇರಿದಂತೆ ತರಹೇವಾರಿ ಭೋಜನವನ್ನು ಪರಿಚಯಿಸುತ್ತಿರುವುದು ವಿಡಿಯೋದಲ್ಲಿದೆ.
ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿರುವ ಶಹೀದ್ ವೀರನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಬ್ಯಾಟಿಂಗ್ ಮಾಡುತ್ತಿರುವ ಕಿವೀಸ್ ಆರಂಭಿಕ ಆಘಾತದಿಂದ ಅಲ್ಪ ಮೊತ್ತಕ್ಕೆ ಕುಸಿಯುವ ಸಾಧ್ಯತೆ ಇದೆ. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಒದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, 1-0 ಮುನ್ನಡೆ ಪಡೆದಿದೆ.