ಸೇಂಟ್ ಲೂಸಿಯಾ:ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಅತಿಥೇಯ ವೆಸ್ಟ್ ಇಂಡೀಸ್ ಕೇವಲ 146 ರನ್ಗಳ ಗುರಿ ನೀಡಿಯೂ 18 ರನ್ಗಳ ರೋಚಕ ಗೆಲುವು ಸಾಧಿಸಿದೆ.
ಡೆರೇನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ಸಿಲುಕಿ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 145 ರನ್ಗಳಿಸಿತ್ತು.
ಇನ್ಫಾರ್ಮ್ ಬ್ಯಾಟ್ಸ್ಮನ್ ಎವಿನ್ ಲೂಯೀಸ್ ಖಾತೆ ತೆರೆಯದೇ ಔಟಾದರೆ, ದೈತ್ಯ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಕೇವಲ 4 ರನ್ಗಳಿಗೆ ಔಟಾದರು. ಆರಂಭಿಕ ಬ್ಯಾಟ್ಸ್ಮನ್ ಲೆಂಡ್ಲ್ ಸಿಮೊನ್ಸ್ 28 ಎಸೆತಗಳಲ್ಲಿ ಕೇವಲ 27 ರನ್ಗಳಿಸಿದರೆ, ಹೆಟ್ಮಾಯರ್ 25 ಎಸೆತಗಳಲ್ಲಿ ಕೇವಲ 20 ರನ್ಗಳಿಸಿ ಔಟಾದರು.
ಒಂದು ಹಂತದಲ್ಲಿ 17 ಓವರ್ಗಳಲ್ಲಿ 101ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ತಂಡ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಕೊನೆಯಲ್ಲಿ ಅಬ್ಬರಿಸಿದ ಆ್ಯಂಡ್ರೆ ರೆಸೆಲ್ ಕೇವಲ 28 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್ಗಳ ಸಹಿತ 51 ರನ್ಗಳಿಸಿ ಸ್ಪರ್ದಾತ್ಮಕ ಮೊತ್ತಕ್ಕೆ ಕಾರಣರಾದರು.