ನವದೆಹಲಿ:ಇಂಗ್ಲೆಂಡ್ ಪ್ರವಾಸದಲ್ಲಿ ಗಾಯಗೊಂಡಿರುವ ಶುಬ್ಮನ್ ಗಿಲ್ ಬದಲಿಗೆ ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ರನ್ನು ಇಂಗ್ಲೆಂಡ್ಗೆ ಕಳುಹಿಸುವ ಚಿಂತನೆಯನ್ನು ಬಿಸಿಸಿಐ ಮಾಡಬಾರದು ಎಂದು ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ನಾಯಕ ಕಪಿಲ್ ದೇವ್ ಹೇಳಿದ್ದಾರೆ.
ಶುಬ್ಮನ್ ಗಿಲ್ ಗಾಯಗೊಂಡಾಗಿನಿಂದ ಯುವ ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ ಅವರನ್ನು ಇಂಗ್ಲೆಂಡ್ಗೆ ಟೆಸ್ಟ್ ಬ್ಯಾಕ್ ಅಪ್ ಆರಂಭಿಕರನ್ನಾಗಿ ಕಳುಹಿಸಲಾಗುತ್ತದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಆದರೆ ಬಿಸಿಸಿಐನಿಂದ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈಗಿರುವ ಮಾಹಿತಿಯ ಪ್ರಕಾರ, ಗಿಲ್ ಆಗಸ್ಟ್ ರಿಂದ ನಡೆಯುವ ಮೊದಲ ಟೆಸ್ಟ್ ಪಂದ್ಯಕ್ಕೆ ಲಭ್ಯರಿರುವುದಿಲ್ಲ ಎನ್ನಲಾಗುತ್ತಿದೆ.
ಇಲ್ಲಿಯವರೆಗೆ ಗಿಲ್ ಕಾಲಿಗೆ ಗಾಯವಾಗಿದೆ ಎನ್ನಲಾಗುತ್ತಿತ್ತು. ಆದರೆ ಅದರ ಪ್ರಮಾಣದ ಅಥವಾ ಯಾವ ಕಾಲಿಗೆ ಏನಾಗಿದೆ ಎನ್ನುವುದರ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚುವರಿ ಆರಂಭಿಕ ಬ್ಯಾಟ್ಸ್ಮನ್ ಕಳಹಿಸುವ ಊಹಾಪೋಹ ಕುರಿತು ಖಾಸಗಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಕಪಿಲ್ ದೇವ್ 'ಕ್ರಿಕೆಟ್ ಮಂಡಳಿ ಆ ವಿಚಾರದ ಬಗ್ಗೆ ಯೋಚನೆಯನ್ನು ಮಾಡಬಾರದು' ಎಂದು ಹೇಳಿದ್ದಾರೆ.
"ತಂಡಕ್ಕೆ ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ರನ್ನು ಸೇರಿಸುವ ನಡೆಯನ್ನು ನಾನು ಒಪ್ಪುವುದಿಲ್ಲ. ತಂಡಕ್ಕಾಗಿ ಈಗಾಗಲೇ ಆರಂಭಿಕರನ್ನು ಆಯ್ಕೆ ಮಾಡಲಾಗಿದೆ. ಅವರು ಈಗಾಗಲೇ ತಂಡದ ಜೊತೆಯಲ್ಲಿದ್ದು, ಅವರಿಗೆ ಆಡಲು ಅವಕಾಶ ಕೊಡಬೇಕು. ಒಂದು ಹೊಸ ಆರಂಭಿಕ ಬ್ಯಾಟ್ಸ್ಮನ್ ಕಳುಹಿಸಿದರೆ ಅದು ಒಳ್ಳೆಯ ಸಂದೇಶವಾಗುವುದಿಲ್ಲ" ಎಂದು ಕಪಿಲ್ ಹೇಳಿದ್ದಾರೆ.
ಪೃಥ್ವಿ ಶಾರನ್ನು ಕಳುಹಿಸುವ ಅಗತ್ಯವಿದೆ ಎಂದು ನಾನು ಭಾವಿಸುವುದಿಲ್ಲ. ಆಯ್ಕೆಗಾರರು ತೆಗೆದುಕೊಂಡಿರುವ ನಿರ್ಧಾರವನ್ನು ಗೌರವಿಸಬೇಕು.ಇದಕ್ಕೂ ಮೊದಲು, ತಂಡವನ್ನು ಆಯ್ಕೆಮಾಡುವಾಗ ವಿರಾಟ್ ಮತ್ತು ಶಾಸ್ತ್ರಿ ಅವರ ಸಲಹೆಯನ್ನು ತೆಗೆದುಕೊಳ್ಳಬೇಕು. ಈಗಾಗಲೇ ನೀವು ಇಬ್ಬರು ಆರಂಭಿಕರಾದ ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಅಂತಹ ಒಳ್ಳೆಯ ಆರಂಭಿಕರು ತಂಡದಲ್ಲಿದ್ದಾರೆ.
ಈ ಕುರಿತು ಕೋಚ್ ಶಾಸ್ತ್ರಿ ಮತ್ತು ನಾಯಕ ಕೊಹ್ಲಿ ಹೆಚ್ಚು ಮಾತನಾಡಬೇಕು. ಆದರೆ ನನ್ನ ಪ್ರಕಾರ ಹೊಸ ಆಟಗಾರನ ಸೇರ್ಪಡೆ ಒಳ್ಳೆಯ ನಡೆಯಲ್ಲ. ಆಟಗಾರರಿಗೆ ಬೆಂಬಲ ನೀಡಬೇಕಿದೆ. ಅವರಿಬ್ಬರು ಶ್ರೇಷ್ಠ ಆಟಗಾರರು ಮತ್ತು ಅವರಿಬ್ಬರಿಗೆ ಅನ್ಯಾಯವಾಗುವುದನ್ನು ನಾನು ಬಯಸುವುದಿಲ್ಲ. ಯಾವುದೇ ಕಾರಣಗಳಿಲ್ಲದೆ ವಿವಾದ ಸೃಷ್ಟಿಯಾಗಬಾರದು ಎಂದು ಕಪಿಲ್ ದೇವ್ ಹೇಳಿದ್ದಾರೆ.
ಇದನ್ನೂ ಓದಿ: ಧವನ್ ನೇತೃತ್ವದ ಭಾರತ ತಂಡವನ್ನು ದ್ವಿತೀಯ ದರ್ಜೆ ಎಂದ ರಣತುಂಗಾಗೆ ಆಕಾಶ್ ಚೋಪ್ರಾ ತಿರುಗೇಟು