ಕಾನ್ಪುರ: ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿ ಗೆದ್ದು ಟೆಸ್ಟ್ ಸರಣಿಗಾಗಿ ಸಿದ್ಧಗೊಳ್ಳುತ್ತಿರುವಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಟಗಾರರಿಗೆ ನೀಡಿರುವ ಆಹಾರ ವೇಳಾಪಟ್ಟಿ ವಿವಾದಕ್ಕೆ ಕಾರಣವಾಗಿದೆ.
ಮೊದಲ ಟೆಸ್ಟ್ ಪಂದ್ಯವನ್ನಾಡುವುದಕ್ಕೆ ಎರಡೂ ತಂಡಗಳು ಕಾನ್ಪುರಕ್ಕೆ ತೆರಳಿವೆ. ಈ ಮಧ್ಯೆ ಭಾರತದ ಆಟಗಾರರಿಗೆ ಆಹಾರದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಹಲಾಲ್ ಮಾಂಸಹಾರಿ ಖಾದ್ಯಗಳ ಸೇವನೆಗೆ ಮಾತ್ರ ಅವಕಾಶ ನೀಡಿದೆ. ಜೊತೆಗೆ, ದನದ ಮಾಂಸ ಮತ್ತು ಹಂದಿ ಮಾಂಸ ಸೇವನೆಯನ್ನು ನಿಷೇಧ ಮಾಡಿದೆ.
ಹಲಾಲ್ ಮಾಂಸಕ್ಕೆ ಮುಸ್ಲಿಮರಲ್ಲಿ ಹೆಚ್ಚು ಮಹತ್ವವಿದೆ ಮತ್ತು ಕಡ್ಡಾಯವಾಗಿದೆ. ಆದರೆ ಉಳಿದ ಧರ್ಮದಲ್ಲಿ ಈ ಮಾಂಸ ಸೇವನೆಗೆ ಅವಕಾಶವಿಲ್ಲ. ಹಲಾಲ್ ಜಟ್ಕಾ ಮಾಂಸವನ್ನು ಸೇವನೆ ಮಾಡುತ್ತಾರೆ. ಟೀಮ್ ಇಂಡಿಯಾದಲ್ಲಿ ಎಲ್ಲಾ ಧರ್ಮದ ಆಟಗಾರರಿರುವಾಗ ಕೇವಲ ಹಲಾಲ್ ಮಾಂಸವನ್ನು ಮಾತ್ರ ಬಿಸಿಸಿಐ ತನ್ನ ಆಹಾರದ ಪಟ್ಟಿಯಲ್ಲಿ ಸೇರಿಸಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾದ ಟೀಕೆಗಳು ಕೇಳಿಬರುತ್ತಿವೆ.
ಏನಿದು ಹಲಾಲ್?
ಹಲಾಲ್ ಎಂದರೆ ಶುದ್ಧ ಆಹಾರ ಎಂಬರ್ಥ. ಇಸ್ಲಾಂ ಧರ್ಮದ ಆಹಾರ ಪದ್ದತಿಯನ್ನು ಹಲಾಲ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಹಲಾಲ್ ಪದ್ದತಿಯಲ್ಲಿ ಪ್ರಾಣಿಗಳನ್ನು ಕೊಲ್ಲುವುದಕ್ಕೆ ಇಂತಹದೇ ಕ್ರಮವನ್ನು ಅನುಸರಿಸಬೇಕೆಂಬ ನಿಯಮವಿದೆ. ಪ್ರಾಣಿಗಳ ಕತ್ತಿನ ನರವನ್ನು ಕತ್ತರಿಸಿ ರಕ್ತವೆಲ್ಲವನ್ನು ಹೊರತೆಗೆಯಬೇಕು. ಜೊತೆಗೆ ಅನಾರೋಗ್ಯದಿಂದ ಅಥವಾ ಸತ್ತ ಪ್ರಾಣಿಗಳ ಸೇವನೆ ನಿಷೇಧವಾಗಿದೆ. ಅಲ್ಲದೆ ಪ್ರಾಣಿಗಳನ್ನು ಕೊಲ್ಲುವ ವ್ಯಕ್ತಿ ಅಲ್ಲಾಹುವಿನ ನಾಮೋಚ್ಛಾರ ಮಾಡುತ್ತಿರಬೇಕೆಂದು ನಿಯಮವಿದೆ.
ಈ ಧರ್ಮದ ಪ್ರಕಾರ ಹಂದಿ, ಹುಲಿ, ಸಿಂಗ ಸೇರಿದಂತೆ ಕೆಲವು ಪ್ರಾಣಿಗಳ ಮಾಂಸ ಸೇವನೆ ನಿಷಿದ್ಧ. ಹಾಗೆಯೇ ಕುರಿ, ಕೋಳಿ, ಮೇಕೆ, ಒಂಟೆ ಮತ್ತು ದನದ ಮಾಂಸವನ್ನು ಕೂಡ ಹಲಾಲ್ ಮಾಡಬೇಕು. ಹೀಗೆ ಮುಸ್ಲಿಮರು ಅನುಸರಿಸುವ ಹಲಾಲ್ ಪದ್ದತಿಯನ್ನು ಭಾರತ ತಂಡದ ಮೆನುವಿನಲ್ಲಿ ಕಡ್ಡಾಯಗೊಳಿಸಿರುವುದಕ್ಕೆ ಬಿಸಿಸಿಐ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಆ ತಪ್ಪುಗಳನ್ನೀಗ ಮಾಡಲ್ಲ, ಭಾರತಕ್ಕೆ ಟೆಸ್ಟ್ನಲ್ಲಿ ತಕ್ಕ ಪೈಪೋಟಿ ನೀಡುತ್ತೇವೆ: ಕಿವೀಸ್ ಕೋಚ್