ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಹಿರಿಯ ಪುರುಷರ ತಂಡಕ್ಕೆ ರಾಷ್ಟ್ರೀಯ ಆಯ್ಕೆಗಾರರ ಒಂದು ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದೆ. ಬಿಸಿಸಿಐ ತನ್ನ ವೆಬ್‌ಸೈಟ್‌ನಲ್ಲಿ ಈ ಜಾಹೀರಾತು ಪ್ರಕಟಿಸಿದೆ. ಆದರೆ, ಪ್ರಸ್ತುತ ಅಜಿತ್ ಅಗರ್ಕರ್ ಅಧ್ಯಕ್ಷತೆಯಲ್ಲಿನ ಐದು ಸದಸ್ಯರ ಸಮಿತಿಯಿಂದ ಯಾವ ಸಕ್ರಿಯ ಆಯ್ಕೆಗಾರರನ್ನು ಬದಲಾಯಿಸಲಾಗುವುದು ಎಂಬುದನ್ನು ನಿರ್ದಿಷ್ಟಪಡಿಸಿಲ್ಲ.
ಬಿಸಿಸಿಐ ಪ್ರಕಾರ, ಟೆಸ್ಟ್, ಟಿ20 ಮತ್ತು ಇತರ ಯಾವುದೇ ಸ್ವರೂಪದಲ್ಲಿ ಪ್ರಾತಿನಿಧ್ಯಕ್ಕಾಗಿ ಹಿರಿಯ ರಾಷ್ಟ್ರೀಯ ಭಾರತೀಯ ತಂಡವನ್ನು ಆಯ್ಕೆ ಮಾಡುವುದು ಐದು ಸದಸ್ಯರ ಸಮಿತಿಯ ಪಾತ್ರವಾಗಿದೆ. ಪ್ರಸ್ತುತ ಆಯ್ಕೆ ಸಮಿತಿಯಲ್ಲಿ ಭಾರತದ ಮಾಜಿ ಆರಂಭಿಕ ಆಟಗಾರ ಶಿವಸುಂದರ್ ದಾಸ್, ಮಾಜಿ ವೇಗಿ ಸಲಿಲ್ ಅಕೋಲಾ, ಸುಬ್ರೋತೊ ಬ್ಯಾನರ್ಜಿ ಮತ್ತು ಶ್ರೀಧರನ್ ಶರತ್ ಇದ್ದಾರೆ. ಸದ್ಯ ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಜಾಹೀರಾತಿನಲ್ಲಿ ಅಜಿತ್ ಅಗರ್ಕರ್ ನೇತೃತ್ವದ ಪ್ರಸ್ತುತ ಐವರು ಸದಸ್ಯರ ಸಮಿತಿಯಿಂದ ಯಾರನ್ನು ಬದಲಿಸಲಾಗುವುದು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಬೇಕಾದ ಅಭ್ಯರ್ಥಿಯು ಕನಿಷ್ಟ ಏಳು ಟೆಸ್ಟ್ ಪಂದ್ಯಗಳು ಅಥವಾ ಮೂವತ್ತು ಪ್ರಥಮ ದರ್ಜೆ ಪಂದ್ಯಗಳನ್ನು ಅಥವಾ 10 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಮತ್ತು 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು. ಅಭ್ಯರ್ಥಿಯು ಕನಿಷ್ಠ ಐದು ವರ್ಷಗಳ ಹಿಂದೆ ನಿವೃತ್ತರಾಗಿರಬೇಕು. ಒಟ್ಟು 5 ವರ್ಷಗಳ ಕಾಲ ಯಾವುದೇ ಕ್ರಿಕೆಟ್ ಸಮಿತಿಯ ಸದಸ್ಯರಾಗಿರುವ ಯಾವುದೇ ವ್ಯಕ್ತಿ (ಬಿಸಿಸಿಐನ ಜ್ಞಾಪಕ ಪತ್ರ ಮತ್ತು ನಿಯಮಗಳು ಮತ್ತು ನಿಯಮಾವಳಿಗಳಲ್ಲಿ ವ್ಯಾಖ್ಯಾನಿಸಲಾಗಿದೆ) ಪುರುಷರ ಆಯ್ಕೆ ಸಮಿತಿಯ ಸದಸ್ಯರಾಗಿರಲು ಅರ್ಹರಾಗಿರುವುದಿಲ್ಲ ಎಂದೂ ಸಹ ಬಿಸಿಸಿಐ ಹೇಳಿದೆ.