ನವದೆಹಲಿ:ಭಾರತ ಕ್ರಿಕೆಟ್ ತಂಡದ ಆಯ್ಕೆಯೇ ಈಗ ಚರ್ಚಾ ವಿಷಯವಾಗಿದೆ. ಆಟಗಾರರ ಜೊತೆಗೆ ನಾಯಕ, ಉಪನಾಯಕನ ನೇಮಕವೂ ಅಚ್ಚರಿ ಮೂಡಿಸಿದೆ. ಬಾಂಗ್ಲಾದೇಶದ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಗಾಯಾಳು ರೋಹಿತ್ ಶರ್ಮಾ ಬದಲಿಗೆ, ಕೆಎಲ್ ರಾಹುಲ್ ನಾಯಕತ್ವ ವಹಿಸಿಕೊಂಡಿದ್ದಾರೆ. ಉಪನಾಯಕನಾಗಬೇಕಿದ್ದ ರಿಷಬ್ ಪಂತ್ ಬದಲಿಗೆ, ಚೇತೇಶ್ವರ್ ಪೂಜಾರ ಅವರನ್ನು ತಂದು ಕೂರಿಸುವ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಶಾಕ್ ನೀಡಿದೆ.
ಪೂಜಾರ ಟೀಂ ಇಂಡಿಯಾ ಟೆಸ್ಟ್ ಉಪನಾಯಕನಾಗಿದ್ದು, ಅಚ್ಚರಿಯ ಜೊತೆಗೆ ಗೊಂದಲ ಉಂಟು ಮಾಡಿದೆ. ರಿಷಬ್ ಪಂತ್ ಮತ್ತು ಕೆಎಲ್ ರಾಹುಲ್ ಭವಿಷ್ಯದ ನಾಯಕರಾಗಿ ರೂಪುಗೊಳ್ಳುತ್ತಿದ್ದಾರೆ. ಆಟದ ಮೊನಚು ಕಳೆದುಕೊಂಡಿದ್ದ ಪಂತ್ ವೈದ್ಯಕೀಯ ಕಾರಣಕ್ಕಾಗಿ ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದರು.
ಟೆಸ್ಟ್ಗೆ ಮರಳಿರುವ ಪಂತ್ ಉಪನಾಯಕನಾಗಿ ಅನುಭವ ಪಡೆದುಕೊಳ್ಳಲಿದ್ದಾರೆ ಎನ್ನುವ ವೇಳೆಗೆ ಬಿಸಿಸಿಐ ಮಹತ್ತರ ನಿರ್ಧಾರ ಪ್ರಕಟಿಸಿ ಚೇತೇಶ್ವರ ಪೂಜಾರರನ್ನು ಆ ಸ್ಥಾನಕ್ಕೆ ಕೂರಿಸಿದೆ. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿಯ ಜೊತೆಗೆ ನಿರ್ಧಾರದ ಬಗ್ಗೆ ಅಸಮಾಧಾನವನ್ನುಂಟು ಮಾಡಿದೆ.
ಬಿಸಿಸಿಐ ಯಾವ ಆಧಾರದ ಮೇಲೆ ಚೇತೇಶ್ವರ್ ಪೂಜಾರರನ್ನು ಉಪನಾಯಕನನ್ನಾಗಿ ಮಾಡಿತು ಎಂಬುದೇ ಪ್ರಶ್ನೆಯಾಗಿದೆ. ಟಿ-20 ಯಲ್ಲಿ ವೈಫಲ್ಯ ಕಂಡಿರುವ ರೋಹಿತ್ ಬದಲಿಗೆ ಬೇರೊಬ್ಬ ನಾಯಕನ ಆಯ್ಕೆಗೆ ಕೂಗು ಕೇಳಿಬಂದಿದೆ. ಏಕದಿನದಲ್ಲೂ ತಂಡದ ಪ್ರದರ್ಶನ ಕುಗ್ಗಿದೆ. ಈಗ ಟೆಸ್ಟ್ನಲ್ಲೂ ಪ್ರಯೋಗಗಳನ್ನು ನಡೆಸಲಾಗುತ್ತಿದೆ.