ಬಹುನಿರೀಕ್ಷಿತ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಭಾರತ ತಂಡವನ್ನು ಬಿಸಿಸಿಐ ಇಂದು ಪ್ರಕಟಿಸಿದೆ. ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಬಲಿಷ್ಠ ತಂಡವನ್ನು ಕಣಕ್ಕಿಳಿಸಲಿದೆ. 15 ತಿಂಗಳ ಬಳಿಕ ಅಜಿಂಕ್ಯಾ ರಹಾನೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬೆನ್ನುನೋವಿನ ಕಾರಣಕ್ಕಾಗಿ ಶ್ರೇಯಸ್ ಅಯ್ಯರ್ ತಂಡದಿಂದ ಹೊರಬಿದ್ದಿದ್ದಾರೆ.
ಕಳೆದ ಬಾರಿಯ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಪ್ರಶಸ್ತಿ ತಪ್ಪಿಸಿಕೊಂಡಿದ್ದ ಭಾರತ ಮತ್ತೆ ಫೈನಲ್ಗೇರಿದೆ. ಈ ಬಾರಿ ಪ್ರಶಸ್ತಿ ಜಯಿಸುವ ಹುಮ್ಮಸ್ಸಿನನಲ್ಲಿರುವ ತಂಡಕ್ಕೆ ಆಸ್ಟ್ರೇಲಿಯಾ ಎದುರಾಳಿಯಾಗಿದೆ. ಕಳೆದ ಬಾರಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಿ ಸೋಲು ಕಂಡಿತ್ತು.
ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸಿದ್ದರೆ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶುಭಮನ್ಗಿಲ್, ಚೇತೇಶ್ವರ ಪೂಜಾರಾ ಬ್ಯಾಟಿಂಗ್ ಬೆನ್ನೆಲುಬಾದರೆ, ಸ್ಪಿನ್ ವಿಭಾಗದಲ್ಲಿ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಇದ್ದಾರೆ. ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಜಯದೇವ್ ಉನದ್ಕತ್ ವೇಗದ ಬೌಲಿಂಗ್ ಶಕ್ತಿಯಾಗಿದ್ದಾರೆ.
15 ತಿಂಗಳ ಬಳಿಕ ವಾಪಸ್:ಭಾರತ ತಂಡದ ಉಪನಾಯಕರಾಗಿದ್ದ ಅಜಿಂಕ್ಯಾ ರಹಾನೆ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯ ವೇಳೆ ನೀಡಿದ ನೀರಸ ಪ್ರದರ್ಶನದ ಬಳಿಕ ತಂಡದಿಂದ ಹೊರಬಿದ್ದಿದ್ದರು. ಅದಾದ ಬಳಿಕ ಅವರು ಒಂದೂವರೆ ವರ್ಷದಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದ್ದು, ತಂಡಕ್ಕೆ ಮರು ಸೇರ್ಪಡೆಯಾಗಿದ್ದಾರೆ. ರಹಾನೆ 2021 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಎರಡು ಇನಿಂಗ್ಸ್ನಲ್ಲಿ 49 ಮತ್ತು 15 ರನ್ ಗಳಿಸಿದ್ದರು.
ಶ್ರೇಯಸ್ ಅಯ್ಯರ್ ಔಟ್:ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಬೆನ್ನುನೋವಿಗೆ ತುತ್ತಾಗಿದ್ದು, ಕಳೆದ ಕೆಲ ದಿನಗಳಿಂದ ಕ್ರಿಕೆಟ್ನಿಂದ ದೂರವುಳಿದಿದ್ದಾರೆ. ಚೇತರಿಸಿಕೊಳ್ಳಲು ಇನ್ನೂ ಸಮಯಬೇಕಿರುವ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿದೆ. ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶ ನಿರ್ಧರಿಸುವ ಭಾರತದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯಲ್ಲಿ ಅಯ್ಯರ್ ಉತ್ತಮ ಪ್ರದರ್ಶನ ನೀಡಿದ್ದರು.