ಮುಂಬೈ :15ನೇ ಆವೃತ್ತಿಯಲ್ಲಿ ಸತತ 4 ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿದೆ. ಆರ್ಸಿಬಿ 15ನೇ ಆವತ್ತಿಯಲ್ಲಿ ಮೊದಲ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಕಂಡ ನಂತರ ಅದ್ಭುತವಾಗಿ ಕಮ್ಬ್ಯಾಕ್ ಮಾಡಿ ಸತತ 3 ಜಯ ಸಾಧಿಸಿದೆ.
ಅದರಲ್ಲೂ ಕಳೆದ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿರುವ ಬೆಂಗಳೂರು ತಂಡ ಸೋತು ಸುಣ್ಣವಾಗಿರುವ ಸಿಎಸ್‌ಕೆ ವಿರುದ್ಧ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಇನ್ನು ಈ ಪಂದ್ಯಕ್ಕೆ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್ವುಡ್ ಕೂಡ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಇದರಿಂದ ಬೌಲಿಂಗ್ ಬಲ ದ್ವಿಗುಣವಾಗಲಿದೆ. ಆದರೆ, ಹರ್ಷಲ್ ಪಟೇಲ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರಾ ಎನ್ನುವುದು ಇನ್ನು ಖಚಿತವಾಗಿಲ್ಲ. ಒಂದು ವೇಳೆ ಪಟೇಲ್ ಕಣಕ್ಕಿಳಿಯದಿದ್ದರೆ, ವೇಗಿ ಸಿದ್ಧಾರ್ಥ್ ಕೌಲ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಎಲ್ಲಾ ವಿಭಾಗದಲ್ಲೂ ವೈಫಲ್ಯ ಅನುಭವಿಸುತ್ತಿದೆ.
ಲಖನೌ ಸೂಪರ್ ಜೈಂಟ್ಸ್ ವಿರುದ್ಧ 200ರ ಗಡಿ ದಾಟಿದ್ದನ್ನು ಹೊರೆತುಪಡಿಸಿದರೆ, ಉಳಿದ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರಿಲ್ಲ. ಕಳೆದ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಪಡೆದಿದ್ದ ಋತುರಾಜ್ ಗಾಯಕ್ವಾಡ್ ಈ ಬಾರಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ಬೌಲಿಂಗ್ ವಿಭಾಗ ಮೊನಚು ಕಳೆದುಕೊಂಡಿದೆ.