ನವದೆಹಲಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಬಾಂಗ್ಲಾದೇಶ ಸತತ ಎರಡರಲ್ಲಿ ಗೆಲುವು ಸಾಧಿಸಿ ಸರಣಿಯನ್ನು 2-0 ಯಿಂದ ವಶಪಡಿಸಿಕೊಂಡಿದೆ. ಈ ಮೂಲಕ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಏಕದಿನ ಸರಣಿಯ ಸೋಲಿನ ಹಗೆಯನ್ನು ತೀರಿಸಿಕೊಂಡಿದೆ. ಕೊನೆಯ ಪಂದ್ಯ ಮಾರ್ಚ್ 14 ರಂದು ನಡೆಯಲಿದ್ದು, ಅದರಲ್ಲಿ ಆಂಗ್ಲರು ಗೆದ್ದು ಕ್ಲೀನ್ ಸ್ವೀಪ್ನಿಂದ ತಪ್ಪಿಸಿಕೊಳ್ಳಬೇಕಿದೆ.
ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ 4 ವಿಕೆಟ್‌ಗಳ ಜಯ ಸಾಧಿಸಿದೆ. ಮೀರ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ ಕೇವಲ 117 ರನ್ ಗಳಿಸಿತು. ಯಾವುದೇ ಇಂಗ್ಲೆಂಡ್ ಬ್ಯಾಟ್ಸ್‌ಮನ್ 28 ರನ್‌ಗಳಿಗಿಂತ ಹೆಚ್ಚು ಗಳಿಸಲು ಸಾಧ್ಯವಾಗಲಿಲ್ಲ. ಬೆನ್ ಡಕೆಟ್ 28 ಎಸೆತಗಳಲ್ಲಿ ಗರಿಷ್ಠ 28 ರನ್ ಗಳಿಸಿದರು. ಇದಲ್ಲದೇ ಫಿಲ್ ಸಾಲ್ಟ್ 19 ಎಸೆತಗಳಲ್ಲಿ 25 ರನ್ ಗಳಿಸಿದರು. ಅದೇ ಸಮಯದಲ್ಲಿ ಮೊಯಿನ್ ಅಲಿ 17 ಎಸೆತಗಳಲ್ಲಿ 15 ರನ್, ಸ್ಯಾಮ್ ಕುರ್ರಾನ್ 16 ಎಸೆತಗಳಲ್ಲಿ 12 ಮತ್ತು ರೆಹಾನ್ ಅಹ್ಮದ್ 11 ಎಸೆತಗಳಲ್ಲಿ 11 ರನ್ ಗಳಿಸಿದರು.
ಬಾಂಗ್ಲಾದೇಶ ಪರ ಮೆಹಿದಿ ಹಸನ್ ಮಿರಾಜ್ 4 ಓವರ್ ಗಳಲ್ಲಿ 12 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ಮೀರಜ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಶಕೀಬ್ ಅಲ್ ಹಸನ್ ಮತ್ತು ಹಸನ್ ಮಹಮೂದ್ ತಲಾ ಒಂದು ವಿಕೆಟ್ ಪಡೆದರು.