ಢಾಕಾ(ಬಾಂಗ್ಲಾದೇಶ):ಮೊದಲ ಟೆಸ್ಟ್ ಪಂದ್ಯವನ್ನು ಸೋತಿರುವ ಬಾಂಗ್ಲಾದೇಶ ಇಂದಿನಿಂದ ಢಾಕಾದ ಶೇರ್ ಎ ಬಾಂಗ್ಲಾ ಮೈದಾನದಲ್ಲಿ ಆರಂಭವಾಗುವ 2ನೇ ಟೆಸ್ಟ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಈ ಪಂದ್ಯವನ್ನೂ ಗೆದ್ದು ಭಾರತ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಹೋರಾಡಲಿದೆ.
ತಂಡದಲ್ಲಿ ಬದಲಾವಣೆ:ಗಾಯದ ಸಮಸ್ಯೆಯಿಂದಾಗಿ ನಾಯಕ ರೋಹಿತ್ ಶರ್ಮಾಗೆ 2ನೇ ಟೆಸ್ಟ್ನಿಂದ ವಿಶ್ರಾಂತಿ ನೀಡಲಾಗಿದೆ. ಇದರಿಂದ ಕನ್ನಡಿಗ ಕೆಎಲ್ ರಾಹುಲ್ ತಂಡದ ಸಾರಥ್ಯ ವಹಿಸಿಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಮಿಂಚು ಹರಿಸಿದ್ದ ಸ್ಪಿನ್ನರ್ ಕುಲದೀಪ್ ಯಾದವ್ರನ್ನು ಈ ಪಂದ್ಯದಿಂದ ಕೈಬಿಡಲಾಗಿದೆ. ಕುಲದೀಪ್ ಬದಲಾಗಿ ಜಯದೇವ್ ಉನದ್ಕಟ್ಗೆ ಅವಕಾಶ ನೀಡಲಾಗಿದೆ.
ಏಕದಿನ ಸರಣಿಯಲ್ಲಿ ಪಾರಮ್ಯ ಮೆರೆದಿದ್ದ ಬಾಂಗ್ಲಾದೇಶ ಮೊದಲ ಟೆಸ್ಟ್ ಸೋಲು ಕಂಗೆಡಿಸಿದ್ದು, 2 ಬದಲಾವಣೆ ಮಾಡಿದೆ. ಯಾಸೀರ್ ಬದಲಾಗಿ ಮೊಮಿನುಲ್, ಎಬಾದತ್ ಬದಲಾಗಿ ವೇಗಿ ಟಸ್ಕಿನ್ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯವನ್ನು ಗೆದ್ದು ಬಾಂಗ್ಲಾ ಸರಣಿಯನ್ನು 1-1 ರಲ್ಲಿ ಸಮಬಲ ಮಾಡಿಕೊಂಡು ಸರಣಿ ಸೋಲಿನಿಂದ ಪಾರಾಗಲು ಯೋಜಿಸಿದೆ.