ಮೆಲ್ಬೋರ್ನ್ (ಆಸ್ಟ್ರೇಲಿಯಾ): ಕಳೆದ ತಿಂಗಳು ಇಂಗ್ಲೆಂಡ್ನಲ್ಲಿ ನಡೆದ ಆ್ಯಶಸ್ ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ ಕೈ ಮಣಿಕಟ್ಟಿನ ಗಾಯಕ್ಕೆ ತುತ್ತಾದ ಆಸ್ಟ್ರೇಲಿಯಾ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಪ್ಯಾಟ್ ಕಮಿನ್ಸ್ ವಿಶ್ವಕಪ್ಗೂ ಮುನ್ನ ಮೈದಾನಕ್ಕಿಳಿಯುವ ಭರವಸೆ ವ್ಯಕ್ತಪಡಿಸಿದ್ದಾರೆ. ಭಾರತ ಪ್ರವಾಸಕ್ಕೂ ಮೊದಲು ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದೆ. ಈ ವೇಳೆ ಕಮಿನ್ಸ್ ತಂಡದ ಜೊತೆಗೆ ತೆರಳಲಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಪ್ಯಾಟ್ ಕಮಿನ್ಸ್ ,"ಗಾಯ ಗಂಭೀರವಾದುದಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತಂಡದೊಂದಿಗೆ ಪ್ರಯಾಣಿಸುತ್ತಿದ್ದೇನೆ. ಇನ್ನು ಕೆಲವು ವಾರಗಳಲ್ಲಿ ಸಂಪೂರ್ಣ ಚೇರಿಸಿಕೊಳ್ಳುತ್ತೇನೆ. ವಿಶ್ವಕಪ್ಗೂ ಮುನ್ನ ತಂಡಕ್ಕೆ ಸೇರಿಕೊಳ್ಳುತ್ತೇನೆ. ಕೈ ಸ್ನಾಯುವಿಗೆ ಬಲವಾಗಿ ಪೆಟ್ಟಾಗಿದೆ. ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ ಅಷ್ಟೇ" ಎಂದರು.
"ನಮಗೆ ದ.ಆಫ್ರಿಕಾ ಪ್ರವಾಸದಲ್ಲಿ ತಂಡದಲ್ಲಿ ಕೆಲವು ಪ್ರಯೋಗಗಳನ್ನು ಮಾಡುವ ಅವಕಾಶವಿದೆ. ಟಿ20 ತಂಡದ ನಾಯಕತ್ವವನ್ನು ಮಾರ್ಷ್‌ಗೆ ಕೊಡಲಾಗಿದೆ. ಅವರು ಉತ್ತಮವಾಗಿ ತಂಡ ಮುನ್ನಡೆಸುವ ಭರವಸೆ ಇದೆ. ತಂಡಕ್ಕೆ ಮಾರ್ಷ್ ಒಬ್ಬ ಉತ್ತಮ ಆಟಗಾರ. ಅವರ ಮುಂದಾಳತ್ವದಲ್ಲಿ ಟೀಂ ವಿದೇಶದಲ್ಲಿ ಗೆಲುವು ದಾಖಲಿಸಲಿದೆ" ಎಂದು ಕಮಿನ್ಸ್ ವಿಶ್ವಾಸ ವ್ಯಕ್ತಪಡಿಸಿದರು.
ದ.ಆಫ್ರಿಕಾದಲ್ಲಿ ಆಸ್ಟ್ರೇಲಿಯಾ 3 ಟಿ20, 5 ಏಕದಿನ ಪಂದ್ಯಗಳ ಸರಣಿ ಆಡಲಿದೆ. ಟಿ20ಗೆ ಈಗಾಗಲೇ ಮಾರ್ಷ್ ನಾಯಕರಾಗಿದ್ದಾರೆ. ಕಮಿನ್ಸ್ ಅನುಪಸ್ಥಿತಿಯಲ್ಲಿ ಮಿಚೆಲ್ ಮಾರ್ಷ್ ಹರಿಣಗಳ ನಾಡಿನಲ್ಲಿ ಏಕದಿನ ತಂಡವನ್ನೂ ಮುನ್ನಡೆಸುವರು. ಆಸ್ಟ್ರೇಲಿಯಾ ತಂಡ ಆಫ್ರಿಕಾದಿಂದ ನೇರವಾಗಿ ಭಾರತಕ್ಕೆ ಆಗಮಿಸಲಿದೆ. ನಂತರ ವಿಶ್ವಕಪ್ ಮುಗಿಸಿ ತವರಿಗೆ ಮರಳಲಿದೆ. ಹೀಗಾಗಿ ತಂಡ ಬಹುತೇಕ ನಾಲ್ಕು ತಿಂಗಳ ಕಾಲ ವಿದೇಶೀ ಪ್ರವಾಸದಲ್ಲೇ ಇರಲಿದೆ.
ದ.ಆಫ್ರಿಕಾದ ವಿರುದ್ಧದ ಪಂದ್ಯಗಳು ಇದೇ ತಿಂಗಳ 30ರಿಂದ ಆರಂಭವಾಗಲಿದ್ದು, ಸಪ್ಟೆಂಬರ್ 17ವರೆಗೆ ನಡೆಯಲಿದೆ. ಸಪ್ಟೆಂಬರ್ 22 ರಿಂದ 27 ರವರೆಗೆ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಅಕ್ಟೋಬರ್ 5ರಿಂದ ವಿಶ್ವಕಪ್ನ ಪಂದ್ಯಗಳು ಆರಂಭವಾಗಲಿವೆ. ಅಕ್ಟೋಬರ್ 8ರಂದು ಆಸ್ಟ್ರೇಲಿಯಾ-ಭಾರತ ಮುಖಾಮುಖಿ ಆಗಲಿದೆ.
ಆಸ್ಟ್ರೇಲಿಯಾ ವಿಶ್ವಕಪ್ ತಂಡ (ಸಂಭಾವ್ಯ) :ಪ್ಯಾಟ್ ಕಮಿನ್ಸ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮರಾನ್ ಗ್ರೀನ್, ಆ್ಯರನ್ ಹಾರ್ಡಿ, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಸ್ಟೀವ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್ ಮತ್ತು ಆ್ಯಡಮ್ ಝಂಪಾ.
ದಕ್ಷಿಣ ಆಫ್ರಿಕಾ ಟಿ20 ತಂಡ: ಏಡೆನ್ ಮಾರ್ಕ್ರಾಮ್ (ನಾಯಕ), ಟೆಂಬಾ ಬವುಮಾ, ಮ್ಯಾಥ್ಯೂ ಬ್ರೆಟ್ಜ್‌ಕೆ, ಡೆವಾಲ್ಡ್ ಬ್ರೂವಿಸ್, ಜೆರಾಲ್ಡ್ ಕೊಯೆಟ್‌ಜಿ, ಡೊನೊವನ್ ಫೆರೆರಾ, ಬೌರ್ನ್ ಫೋರ್ಟಿನ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸನ್, ಸಿಸಂದಾ ಮಗಲಾ, ಕೇಶವ್ ಮಹಾರಾಜ್, ಲುಂಗಿ ಗಿಡಿ, ಟ್ರೀಸ್ತಾನ್ ಅಂಗಿಡಿಬ್ಸ್ ಲಿಜಾಡ್ ವಿಲಿಯಮ್ಸ್ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್.
ದಕ್ಷಿಣ ಆಫ್ರಿಕಾ ಏಕದಿನ ತಂಡ: ತೆಂಬಾ ಬವುಮಾ (ನಾಯಕ), ಡೆವಾಲ್ಡ್ ಬ್ರೂವಿಸ್, ಜೆರಾಲ್ಡ್ ಕೋಟ್ಜಿ, ಕ್ವಿಂಟನ್ ಡಿ ಕಾಕ್, ಜಾರ್ನ್ ಫೋರ್ಟಿನ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸನ್, ಹೆನ್ರಿಚ್ ಕ್ಲಾಸೆನ್, ಸಿಸಂದಾ ಮಾಗಲಾ, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ತಬ್ರೈಜ್ ಶಮ್ಸಿ, ವ್ಯಾನ್ ಪಾರ್ನೆಲ್, ಕಗಿಸೊ ರಬಾಡ, ಟ್ರಿಸ್ಟಾನ್ ಸ್ಟಬ್ಸ್, ರಾಸ್ಸೀ ವ್ಯಾನ್ ಡೆರ್ ಡುಸ್ಸೆನ್.
ಇದನ್ನೂ ಓದಿ:ಐರ್ಲೆಂಡ್ ಟಿ20 ಸರಣಿಗೆ ತೆರಳಿದ ಭಾರತ ತಂಡ.. ಬುಮ್ರಾ ನಾಯಕತ್ವದಲ್ಲಿ ಐಪಿಎಲ್ ಸ್ಟಾರ್ಸ್ ಪಡೆ