ಸಿಡ್ನಿ ( ಆಸ್ಟ್ರೇಲಿಯಾ): ಸೆಪ್ಟೆಂಬರ್ 22 ರಿಂದ ಭಾರತದ ವಿರುದ್ಧ ಆಸ್ಟ್ರೇಲಿಯಾ ವಿಶ್ವಕಪ್ನ ತಯಾರಿ ಹಿನ್ನೆಲೆಯಲ್ಲಿ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಗೆ ಆಸ್ಟ್ರೇಲಿಯಾ ತನ್ನ 18 ಸದಸ್ಯರ ತಂಡವನ್ನು ಪ್ರಕಟಿಸಿದೆ. ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಪ್ಯಾಟ್ ಕಮಿನ್ಸ್ ನಾಯಕರಾಗಿ ಮರಳಿರುವುದರ ಜೊತೆಗೆ ಹಲವು ಪ್ರಮುಖ ಆಟಗಾರರು ವಾಪಸಾಗಿರುವುದು ಆಸ್ಟ್ರೇಲಿಯಾಕ್ಕೆ ಪುಷ್ಟಿ ನೀಡಿದೆ.
ಬುಹುತೇಕ ಗಾಯದ ಕಾರಣದಿಂದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಸ್ಟ್ರೇಲಿಯಾ ಕೆಲ ಪಂದ್ಯಗಳನ್ನು ಕಳೆದುಕೊಂಡಿದೆ. ಇಂದು ಏಕದಿನ ಸರಣಿಯ ಫೈನಲ್ ಮ್ಯಾಚ್ನಲ್ಲಿ ಸೌಥ ಆಫ್ರಿಕಾ ಸರಣಿ ಜಯ ಸಾಧಿಸಿದೆ. ಸೋತಿರುವ ಆಸಿಸ್ ತಂಡ ಖಾಲಿ ಕೈಯಲ್ಲಿ ಭಾರತ ಪ್ರವಾಸ ಮಾಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಆ್ಯಶಸ್ ಸರಣಿಯಲ್ಲಿ ಗಾಯಗೊಂಡು ಕಾಂಗರೂ ಪಡೆಯ ಪ್ರಮುಖ ಆಟಗಾರರು ಹರಿಣಗಳ ವಿರುದ್ಧದ ಸರಣಿಯಲ್ಲಿ ಆಡಿರಲಿಲ್ಲ. ಅನುಭವಿಗಳು ವಿಶ್ವಕಪ್ಗೂ ಮುನ್ನ ಭಾರತದ ವಿರುದ್ಧದ ಸರಣಿಯಲ್ಲಿ ಕಮ್ಬ್ಯಾಕ್ ಮಾಡುತ್ತಿದ್ದಾರೆ.
ಪ್ಯಾಟ್ ಕಮಿನ್ಸ್ ಮತ್ತು ಸ್ಟೀವ್ ಸ್ಮಿತ್ ಅವರು ಮಣಿಕಟ್ಟಿನ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದರು. ಆದರೆ ಮಿಚೆಲ್ ಸ್ಟಾರ್ಕ್ ಯುಕೆಯಿಂದ ಹಿಂದಿರುಗಿದ ನಂತರ ಅವರ ತೊಡೆಸಂದು ಮತ್ತು ಭುಜದಲ್ಲಿ ನೋವನ್ನು ಅನುಭವಿಸಿದರು. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟಿ20 ಪಂದ್ಯಗಳನ್ನು ಆಡಿದ ಗ್ಲೆನ್ ಮ್ಯಾಕ್ಸ್‌ವೆಲ್ ಪಾದದ ನೋವಿಗೆ ತುತ್ತಾಗಿದ್ದರು. ಅವರ ಮಗುವಿನ ಜನನದ ಹಿನ್ನೆಲೆಯಲ್ಲಿ ತವರಿಗೆ ಮರಳಿದ ಮ್ಯಾಕ್ಸಿ ಏಕದಿನ ಪಂದ್ಯಗಳಿಗೆ ಅಲಭ್ಯರಾಗಿದ್ದರು. ವೇಗಿ ಕ್ಯಾಮರೂನ್ ಗ್ರೀನ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಈಗ ಎಲ್ಲಾ ಆಟಗಾರರು ಭಾರತದ ವಿರುದ್ಧದ ಪಂದ್ಯಕ್ಕೆ ತಂಡವನ್ನು ಸೇರಿಕೊಂಡಿದ್ದಾರೆ.