ಹ್ಯಾಂಗ್‌ಝೌ, ಚೀನಾ:ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಇದೇ ಮೊದಲ ಬಾರಿಗೆ ಬಿಸಿಸಿಐ ವನಿತೆಯರ ಮತ್ತು ಪುರುಷರ ತಂಡವನ್ನು ಚೀನಾದ ಹ್ಯಾಂಗ್‌ಝೌಗೆ ಕಳುಹಿಸಿದೆ. ವನಿತೆಯರ ತಂಡ ಇತ್ತೀಚೆಗೆ ತಮ್ಮ ಮೊದಲ ಪ್ರಯತ್ನದಲ್ಲೇ ಸ್ವರ್ಣ ಪದಕ ಗೆದ್ದುಕೊಂಡಿದೆ. ಇಂದು ರುತುರಾಜ್ ಗಾಯಕ್ವಾಡ್ ನಾಯಕತ್ವದ ಭಾರತ ತಂಡ ಏಷ್ಯಾಡ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನೇಪಾಳ ವಿರುದ್ಧ 23 ರನ್ಗಳ ಗೆಲುವು ಸಾಧಿಸಿದೆ.
ಭಾರತಕ್ಕೆ ಉತ್ತಮ ಆರಂಭ:ನೇಪಾಳ ವಿರುದ್ಧ ಟಾಸ್ ಗೆದ್ದ ಭಾರತ ತಂಡ ಮೊದಲ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕರಾದ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ನೇಪಾಳ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಈ ಇಬ್ಬರು ಆಟಗಾರರು ಮೊದಲ ವಿಕೆಟ್ ಪತನಕ್ಕೆ ಶತಕದ ಜೊತೆಯಾಟವಾಡಿದರು. ನಾಯಕ ರುತುರಾಜ್ ಗಾಯಕ್ವಾಡ್ 25 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಬಳಿಕ ಬಂದ ಮತ್ತೊಬ್ಬ ಸ್ಫೋಟಕ ಆಟಗಾರ ತಿಲಕ್ ವರ್ಮಾ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೇ ವಿಕೆಟ್ವೊಪ್ಪಿಸಿ ನಿರ್ಗಮಿಸಿದರು. ಅವರು ಕೇವಲ 2 ರನ್ ಮಾತ್ರ ಗಳಿಸಿದ್ದರು.
ವರ್ಮಾ ಔಟಾದ ಬೆನ್ನೆಲ್ಲೇ ಬಂದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜಿತೇಶ್ ಶರ್ಮಾ 5 ರನ್ ಕಲೆ ಹಾಕಿ ಔಟಾದರು. ಇನ್ನು ಆರಂಭಿಕರಾಗಿ ಭರ್ಜರಿ ಪ್ರದರ್ಶನ ತೋರಿದ ಯಶಸ್ವಿ ಜೈಸ್ವಾಲ್ 48 ಎಸೆತಗಳಲ್ಲಿ ಶತಕ ಬಾರಿಸಿ, ಔಟಾದರು. ಕೊನೆಯಲ್ಲಿ ಶಿವಂ ದುಬೆ 25 ಮತ್ತು ರಿಂಕು ಸಿಂಗ್ 37 ರನ್ ಸಿಡಿಸಿ ತಂಡದ ಮೊತ್ತ ಇನ್ನೂರರ ಗಡಿ ದಾಟಿಸಿದರು. ಭಾರತ ತಂಡ 20 ಓವರ್ಗಳಿಗೆ 4 ವಿಕೆಟ್ಗಳ ನಷ್ಟಕ್ಕೆ 202 ರನ್ಗಳನ್ನು ಕಲೆ ಹಾಕಿತು. ನೇಪಾಳ ಪರ ಸೋಂಪಾಲ್ ಕಮಿ, ದೀಪೇಂದ್ರ ಸಿಂಗ್ ಐರಿ ಮತ್ತು ಸಂದೀಪ್ ಲಮಿಚಾನೆ ತಲಾ ಒಂದೊಂದು ವಿಕೆಟ್ ಪಡೆದು ಭಾರತ ತಂಡವನ್ನು ಕಟ್ಟಿ ಹಾಕಲು ಯತ್ನಿಸಿದರು.
ಫಲಸಲಿಲ್ಲ ನೇಪಾಳ ಹೋರಾಟ:ಭಾರತ ನೀಡಿದ 203 ಗುರಿಯನ್ನು ಬೆನ್ನತ್ತಿದ್ದ ನೇಪಾಳ ಆರಂಭದಿಂದಲೇ ಎಚ್ಚರಿಕೆಯಿಂದ ಕಣಕ್ಕಿಳಿಯಿತು. ಒಂದು ಕಡೆಯಿಂದ ವಿಕೆಟ್ ಪತನಗೊಳ್ಳುತ್ತಿದ್ದರೇ, ಮತ್ತೊಂದು ಕಡೆಯಿಂದ ಸ್ಕೋರ್ ಬೋರ್ಡ್ಗಳಲ್ಲಿ ರನ್ಗಳ ಹೊಳೆಯೇ ಹರಿದು ಬರುತ್ತಿತ್ತು. ಒಟ್ನಲ್ಲಿ ನಿಗದಿತ 20 ಓವರ್ಗಳಿಗೆ ನೇಪಾಳ ತಂಡ 9 ವಿಕೆಟ್ಗಳನ್ನು ಕಳೆದುಕೊಂಡು 179 ರನ್ಗಳನ್ನು ಮಾತ್ರ ಕಲೆ ಹಾಕಲು ಶಸಕ್ತವಾಯಿತು.