ಪಲ್ಲೆಕಲೆ (ಶ್ರೀಲಂಕಾ): ಕ್ರೀಡಾಭಿಮಾನಿಗಳು ಬಹು ಸಮಯದಿಂದ ಕಾತರದಿಂದ ಕಾಯುತ್ತಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಇಂದು ಲಂಕಾದ ಪಲ್ಲೆಕಲೆ ಮೈದಾನದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ರೋಹಿತ್ ಶರ್ಮಾ ಆಳವಾದ ಬ್ಯಾಟಿಂಗ್ ಪಡೆಯನ್ನು ಕಟ್ಟಿದ್ದಾರೆ.
ಬುಮ್ರಾ ಮೇಲೆ ಎಲ್ಲರ ಕಣ್ಣು:ನಾಯಕ ರೋಹಿತ್ ಶರ್ಮಾ ಹಾರ್ದಿಕ್, ಜಡೇಜ ಮತ್ತು ಶಾರ್ದೂಲ್ ಮೂವರು ಆಲ್ ರೌಂಡರ್ಗಳನ್ನು ಒಳಗೊಂಡ ತಂಡವನ್ನು ಮೈದಾನಕ್ಕಿಳಿಸಿದ್ದಾರೆ. ಜಡೇಜ ಮತ್ತು ಕುಲ್ದೀಪ್ ಜೋಡಿ ಸ್ಪಿನ್ನಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಬುಮ್ರಾ ಐರ್ಲೆಂಡ್ ವಿರುದ್ಧ ಟಿ20 ನಾಯಕತ್ವದ ನಂತರ ತಂಡಕ್ಕೆ ಮರಳಿದ್ದರು. ಈಗ ಏಷ್ಯಾಕಪ್ ಮೂಲಕ ಏಕದಿನದಲ್ಲಿ ಕಮಾಲ್ ಮಾಡಲಿದ್ದಾರೆ.
ಶ್ರೀಲಂಕಾ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ
ಈ ಪಿಚ್ನಲ್ಲಿ ಗುರುವಾರ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೆಣಸಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಲಂಕಾದ ಸ್ಪಿನ್ನರ್ಗಳಿ ಮೇಲುಗೈ ಸಾಧಿಸಿದರೆ, ಎರಡನೇ ಇನ್ನಿಂಗ್ಸ್ನಲ್ಲಿ ಬಾಂಗ್ಲಾದ ವೇಗಿಗಳು ಪ್ರಭಾವ ಬೀರಿದ್ದರು. ಬ್ಯಾಟಿಂಗ್ ಪಿಚ್ ಎಂದೇ ಕರೆಸಿಕೊಳ್ಳುವ ಮೈದಾನದಲ್ಲಿ ಗುರುವಾರ ಲೋ ಸ್ಕೋರ್ ಪಂದ್ಯ ನಡೆದಿತ್ತು.
ಪ್ರೆಸ್ ಮೀಟ್ನಲ್ಲಿ ರೋಹಿತ್ ಟಾಸ್ನ ಗೆಲುವನ್ನು ಪಂದ್ಯದ ಗೆಲುವು ಎನ್ನಲಾರೆ, ಆದರೆ ಪರಿಣಾಮ ಬೀರಬಹುದು ಎಂದಿದ್ದಾರೆ. ಅವರ ಮಾತಿನಂತೆ ಟಾಸ್ ಹೆಚ್ಚು ಪರಿಣಾಮ ಅಲ್ಲದಿದ್ದರೂ, ಮಳೆಯ ಹಿನ್ನೆಲೆಯಿಂದಾಗಿ ಈ ಪಂದ್ಯಕ್ಕೆ ನಾಯಕರು ಟಾಸ್ಗೆ ಹೆಚ್ಚು ಮಹತ್ವ ನೀಡಬೇಕಾಗುತ್ತದೆ.
ಪಿಚ್ ಹೇಗಿದೆ: ಪಲ್ಲೆಕಲೆ ಪಿಚ್ ಬ್ಯಾಟಿಂಗ್ ಸ್ನೇಹಿ ಎಂದು ಕರೆಸಿಕೊಂಡಿದೆ. ಈ ಮೈದಾನದ ಸರಾಸರಿ ಮೊತ್ತ 250ರ ಆಸುಪಾಸು. 2018ರಲ್ಲಿ ಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ಈ ಫೀಲ್ಡ್ನಲ್ಲಿ 363/7 ರನ್ ಗಳಿಸಿದೆ. ಇದು ಅತಿ ಹೆಚ್ಚು ರನ್ ದಾಖಲೆ ಆಗಿದೆ. ಆದರೆ ಜಿಂಬಾಬ್ವೆ ಇಲ್ಲಿ 70 ರನ್ಗೆ ಸರ್ವಪತನ ಕಂಡಿದ್ದು ಅಲ್ಪ ಮೊತ್ತದ ಸ್ಕೋರ್ ಇದಾಗಿದೆ. ಚೇಸಿಂಗ್ ಮಾಡಿದ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಲೆಕ್ಕಾಚಾರ ಈ ಮೈದಾನದ್ದು, 34 ಪಂದ್ಯದಲ್ಲಿ 19 ಚೇಸಿಂಗ್ನಿಂದ ಗೆಲುವು ದೊರೆತಿದೆ.
ಪಿಚ್ ಸಾಮಾನ್ಯವಾಗಿ ಇನ್ನಿಂಗ್ಸ್‌ನ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿರುತ್ತದೆ. ನಂತರ ಪಿಚ್ನ ಪ್ರಯೋಜನವನ್ನು ಸ್ಪಿನ್ನರ್‌ಗಳು ಪಡೆದಿದ್ದಾರೆ. 2011 ರಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್ ಅವರ 6/31 ಪಡೆದಿರುವುದು ಬೆಸ್ಟ್ ಬೌಲಿಂಗ್ ರೆಕಾರ್ಡ್ ಆಗಿದೆ.
ತಂಡಗಳು ಇಂತಿವೆ.. ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಪಾಕಿಸ್ತಾನ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್
ಇದನ್ನೂ ಓದಿ:ಏಷ್ಯಾ ಕಪ್ 2023: ಇಂದು ಭಾರತ Vs ಪಾಕಿಸ್ತಾನ ರೋಚಕ ಹಣಾಹಣಿಗೆ ವೇದಿಕೆ ಸಿದ್ಧ..