ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್ ಕೀರೀಟಕ್ಕಾಗಿ ಇಂದು ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ಸೆಣಸಾಡುತ್ತಿದ್ದು, ಟಾಸ್ ಗೆದ್ದ ಲಂಕಾ ನಾಯಕ ಶನಕ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಗಾಯಗೊಂಡ ಅಕ್ಷರ್ ಪಟೇಲ್ ಏಷ್ಯಾಕಪ್ನಿಂದ ಹೊರಗುಳಿದಿದ್ದು ಅವರ ಜಾಗಕ್ಕೆ ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಉಳಿದಂತೆ ಬಾಂಗ್ಲಾದೇಶದ ಪಂದ್ಯಕ್ಕೆ ವಿಶ್ರಾಂತಿ ನೀಡಿದ್ದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಮತ್ತೆ ತಂಡಕ್ಕೆ ಸೇರಿಕೊಂಡಿದ್ದಾರೆ.
ಶುಕ್ರವಾರ ನಡೆದ ಬಾಂಗ್ಲಾದೇಶದ ವಿರುದ್ಧದ ಸೂಪರ್ ಫೋರ್ ಹಂತದ ಪಂದ್ಯದ ವೇಳೆ ಎಡ ಕಾಲಿನ ತೊಡೆಯ ಭಾಗಕ್ಕೆ ಒತ್ತಡದ ನೋವಿಗೆ ಒಳಗಾದ ಅಕ್ಷರ್ ಪಟೇಲ್ ಅವರು ಏಷ್ಯಾಕಪ್ನಿಂದ ಹೊರಗುಳಿದಿದ್ದಾರೆ. ಅವರ ಜಾಗಕ್ಕೆ ನಿನ್ನೆ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆರ್ ಪ್ರೇಮದಾಸ ಮೈದಾನ ಸ್ಪಿನ್ಗೆ ಸಹಕಾರಿ ಆಗಿರುವುದರಿಂದ ಇಂದಿನ ಪಂದ್ಯದಲ್ಲಿ ಮೂರನೇ ಸ್ಪಿನ್ನರ್ ಆಗಿ ವಾಷಿಂಗ್ಟನ್ ಸುಂದರ್ ಅವರನ್ನು ತಂಡದಲ್ಲಿ ಆಡಿಸಲಾಗುತ್ತಿದೆ.
ಲಂಕಾದಲ್ಲೂ ಒಂದು ಬದಲಾವಣೆ: ಲಂಕಾದ ಸ್ಪಿನ್ನರ್ ಮಹೇಶ್ ತೀಕ್ಷ್ಣ ಗಾಯಗೊಂಡಿದ್ದರಿಂದ ಅವರ ಬದಲಿಯಾಗಿ ತಂಡದಲ್ಲಿ ದುಶನ್ ಹೇಮಂತ ಅವರನ್ನು ಆಡಿಸಲಾಗುತ್ತಿದೆ.