ಕರ್ನಾಟಕ

karnataka

ETV Bharat / sports

Usman Khawaja: ಆ್ಯಶಸ್​ ಟೆಸ್ಟ್​- ಇಂಗ್ಲೆಂಡ್​ ನೆಲದಲ್ಲಿ ಉಸ್ಮಾನ್​ ಖವಾಜಾ ಚೊಚ್ಚಲ ಶತಕ, ಆಸೀಸ್​ 5ಕ್ಕೆ 311 - Australia fightback Ashes test

ಆ್ಯಶಸ್​ ಟೆಸ್ಟ್​ ಸರಣಿಯಲ್ಲಿ ಆಸೀಸ್​ ದಿಟ್ಟ ಹೋರಾಟ ನಡೆಸಿದೆ. ಉಸ್ಮಾನ್​ ಖವಾಜಾ ಅಜೇಯ ಶತಕ ಹಾಗು ಅಲೆಕ್ಸ್​ ಕ್ಯಾರಿ ಅಜೇಯ ಅರ್ಧಶತಕ ಗಳಿಸಿದ್ದು, ಇಂದು 3ನೇ ದಿನಕ್ಕೆ ಕ್ರೀಸ್​ ಉಳಿಸಿಕೊಂಡಿದ್ದಾರೆ.

ಉಸ್ಮಾನ್​ ಖವಾಜಾ ಚೊಚ್ಚಲ ಶತಕ
ಉಸ್ಮಾನ್​ ಖವಾಜಾ ಚೊಚ್ಚಲ ಶತಕ

By

Published : Jun 18, 2023, 9:51 AM IST

ಬರ್ಮಿಂಗ್​ಹ್ಯಾಮ್ (ಇಂಗ್ಲೆಂಡ್):ಕ್ರಿಕೆಟ್‌ಬದ್ಧವೈರಿಗಳಾದ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆಯುತ್ತಿರುವ ಆ್ಯಶಸ್​ ಟೆಸ್ಟ್​ನ ಮೊದಲ ಪಂದ್ಯದ ಎರಡೇ ದಿನದಲ್ಲಿ 700ಕ್ಕೂ ಅಧಿಕ ರನ್​ಗಳು ದಾಖಲಾಗಿವೆ. ಮೊದಲ ಇನಿಂಗ್ಸ್​ನಲ್ಲಿ ಇಂಗ್ಲೆಂಡ್​ ನೀಡಿದ 393 ರನ್‌​ಗಳ ಗುರಿಯನ್ನು ಆರಂಭಿಕ ಬ್ಯಾಟರ್​ ಉಸ್ಮಾನ್​ ಖವಾಜಾ ಅವರ ಅಜೇಯ ಶತಕದ ಬಲದಿಂದ ದಿಟ್ಟವಾಗಿ ಎದುರಿಸುತ್ತಿರುವ ಆಸೀಸ್​ 2ನೇ ದಿನದ ಅಂತ್ಯಕ್ಕೆ 5 ವಿಕೆಟ್​ಗೆ 311 ರನ್​ ಗಳಿಸಿತು. ತಂಡ ಇನ್ನೂ 82 ರನ್​ಗಳ ಹಿನ್ನಡೆಯಲ್ಲಿದೆ.

ಟೆಸ್ಟ್ ಕ್ರಿಕೆಟ್​ನಲ್ಲಿ 62 ಪಂದ್ಯಗಳನ್ನಾಡಿ 15 ಶತಕ ಬಾರಿಸಿರುವ ಉಸ್ಮಾನ್​ ಖವಾಜಾ ಇಂಗ್ಲೆಂಡ್​ನಲ್ಲಿ ನೆಲದಲ್ಲಿ ಇದೇ ಮೊದಲ ಬಾರಿಗೆ ಸೆಂಚುರಿ ಬಾರಿಸಿದ್ದಾರೆ. ಆರಂಭಿಕ ಹಿನ್ನಡೆಯ ನಡುವೆಯೂ ಉತ್ತಮ ಬ್ಯಾಟ್​ ಬೀಸಿದ ಎಡಗೈ ದಾಂಡಿಗ ಬ್ರಿಟಿಷ್​ ನೆಲದಲ್ಲಿ ಚೊಚ್ಚಲ ಶತಕ (126) ದಾಖಲಿಸಿ ಖುಷಿ ಪಟ್ಟರು. ಈ ಸಾಧನೆ ಬಳಿಕ ಆಟಗಾರ ಬ್ಯಾಟನ್ನು ಗಾಳಿಯಲ್ಲಿ ತೂರಿ ಸಂಭ್ರಮಾಚರಣೆ ಮಾಡಿದ್ದು ವಿಶೇಷವಾಗಿತ್ತು.

ಇನಿಂಗ್ಸ್​​​ ಆರಂಭದಲ್ಲಿ ಹಿರಿಯ ಆಟಗಾರ ಡೇವಿಡ್​ ವಾರ್ನರ್​ 9 ರನ್​ಗೆ ಸ್ಟುವರ್ಟ್​ ಬ್ರಾಡ್​ಗೆ ವಿಕೆಟ್​ ನೀಡಿದರು. ಇದಾದ ಮುಂದಿನ ಎಸೆತದಲ್ಲಿ ವಿಶ್ವದ ನಂಬರ್​ 1 ಟೆಸ್ಟ್​ ಬ್ಯಾಟರ್​ ಮಾರ್ನಸ್​ ಲಬುಶೇನ್​ ಸೊನ್ನೆ ಸುತ್ತಿದರು. ಇದು ತಂಡಕ್ಕೆ ಭಾರಿ ಹೊಡೆತ ನೀಡಿತು. ಮಧ್ಯಮ ಕ್ರಮಾಂಕದ ಆಧಾರ ಭರ್ಜರಿ ಲಯದಲ್ಲಿರುವ ಸ್ಟೀವ್​ ಸ್ಮಿತ್​ 16 ರನ್​ಗೆ ಮೈದಾನ ತೊರೆದರು. ಇದರಿಂದ ತಂಡ ಕೇವಲ 67 ರನ್​ಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ವೇಳೆ ಕ್ರೀಸ್​ಗಿಳಿದ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ನ ಹೀರೋ ಟ್ರೇವಿಸ್​ ಹೆಡ್ (50) ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಆಧರಿಸಿ ಔಟಾದರು. ಕ್ಯಾಮರೂನ್​ ಗ್ರೀನ್​ 38 ರನ್​ ಮಾಡಿ ಟೆಸ್ಟ್​ ನಿವೃತ್ತಿಯಿಂದ ಮರಳಿ ಬಂದ ಮೊಯೀನ್​ ಅಲಿ ಎಸೆತದಲ್ಲಿ ಔಟ್​ ಆದರು.

ಖವಾಜಾ ಶತಕ ಸಾಧನೆ:ತಂಡ ಒಂದೊಂದೇ ವಿಕೆಟ್​ ಕಳೆದುಕೊಳ್ಳುತ್ತಿದ್ದರೂ ದೃಢವಾಗಿ ನಿಂತು ಆಡಿದ ಉಸ್ಮಾನ್​ ಖವಾಜಾ ಇಂಗ್ಲಿಷರ ನಾಡಲ್ಲಿ ಚೊಚ್ಚಲ ಅಜೇಯ ಶತಕ (126) ಸಾಧನೆ ಮಾಡಿದರು. ಬ್ರಿಟಿಷರ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಬ್ಯಾಟರ್​ 14 ಬೌಂಡರಿ, 2 ಸಿಕ್ಸರ್ ಸಿಡಿಸಿದರು. ಇತ್ತ ಅಲೆಕ್ಸ್​ ಕ್ಯಾರಿ ಕೂಡ 52 ರನ್​ ಮಾಡಿದ್ದು, ಅಜೇಯರಾಗುಳಿದು ಇಂದಿಗೆ ಕ್ರೀಸ್​ ಕಾಯ್ದುಕೊಂಡಿದ್ದಾರೆ. ಇಬ್ಬರೂ ಸೇರಿ 91 ರನ್​ ಜೊತೆಯಾಟ ನೀಡಿದರು.

ಇತ್ತ ಇಂಗ್ಲೆಂಡ್​ ಪರವಾಗಿ 29 ಓವರ್​ ಎಸೆದ ಮೊಯೀನ್​ ಅಲಿ 124ಕ್ಕೆ 2, ಸ್ಟುವರ್ಟ್​ ಬ್ರಾಡ್​ 49ಕ್ಕೆ 2, ಬೆನ್​ ಸ್ಟೋಕ್ಸ್​ 1 ವಿಕೆಟ್​ ಗಳಿಸಿದ್ದಾರೆ. ಆಸೀಸ್​ ಪಡೆಯನ್ನು ಕಡಿಮೆ ರನ್​ಗೆ ಕಟ್ಟಿಹಾಕುವ ಇರಾದೆಯಲ್ಲಿದ್ದ ಇಂಗ್ಲೆಂಡ್​ ಮೊದಲ ದಿನದಲ್ಲೇ 393 ರನ್​ಗೆ ಡಿಕ್ಲೇರ್​ ಮಾಡಿಕೊಂಡಿತ್ತು. ಆದರೆ, ಖವಾಜಾ ಶತಕ ಇಬ್ಬರು ಆಟಗಾರರ ಅರ್ಧಶತಕದಿಂದ ಆಸೀಸ್​ ಮುನ್ನಡೆ ಸಾಧಿಸುವತ್ತ ನುಗ್ಗುತ್ತಿದೆ.

ಇಂಗ್ಲೆಂಡ್ ಮೊದಲ ಇನಿಂಗ್ಸ್​ನಲ್ಲಿ ಜೋ ರೂಟ್​ 118 ರನ್​ ಗಳಿಸಿ ಅಜೇಯರಾಗಿ ಉಳಿದರೆ, ಝಾಕ್​ ಕ್ರಾವ್ಲಿ 61, ಜಾನಿ ಬೈರ್​ಸ್ಟೋವ್​ 78 ರನ್​ ಗಳಿಸಿದ್ದರು.

ಇದನ್ನೂ ಓದಿ:Ashes 2023: ತಂಡಕ್ಕಾಗಿ ಏಕಾಂಗಿ ಪ್ರದರ್ಶನ ನೀಡಿ ತಮ್ಮದೇ ತಂಡದ ಆಟಗಾರನ ದಾಖಲೆ ಮುರಿದ ರೋಟ್​

ABOUT THE AUTHOR

...view details