ಲಾರ್ಡ್ಸ್ (ಲಂಡನ್):ಆ್ಯಶಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತು. ನಾಥನ್ ಲಿಯಾನ್ ಈ ಮ್ಯಾಚ್ನಲ್ಲಿ ಸ್ಥಾನ ಪಡೆಯುವ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ. ಟೆಸ್ಟ್ ಮಾದರಿ ಕ್ರಿಕೆಟ್ನಲ್ಲಿ ಸತತ 100 ಪಂದ್ಯಗಳನ್ನು ಆಡಿದ ಮೊದಲ ಸ್ಪೆಷಲಿಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ.
ಜುಲೈ 2011ರಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಲಿಯಾನ್, ಕ್ರಿಕೆಟ್ ಇತಿಹಾಸದಲ್ಲಿ ಸತತ 100 ಟೆಸ್ಟ್‌ಗಳಲ್ಲಿ ಕಾಣಿಸಿಕೊಂಡ ಆರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲಸ್ಟೈರ್ ಕುಕ್ (159), ಅಲನ್ ಬಾರ್ಡರ್ (153), ಮಾರ್ಕ್ ವಾ (107), ಸುನಿಲ್ ಗವಾಸ್ಕರ್ (106) ಮತ್ತು ಬ್ರೆಂಡನ್ ಮೆಕಲಮ್ (101) ಪಟ್ಟಿಯಲ್ಲಿರುವ ಇತರ ಆಟಗಾರರು. ಸುನಿಲ್ ಗವಾಸ್ಕರ್ ಸತತ 100 ಪಂದ್ಯಗಳನ್ನು ಆಡಿದ ಭಾರತದ ಆಟಗಾರನಾಗಿದ್ದಾರೆ.
ಕಾಕತಾಳೀಯವೆಂದರೆ, 2011ರಲ್ಲಿ ಪಾದಾರ್ಪಣೆ ಮಾಡಿದ್ದ ಲಿಯಾನ್ ಅವರನ್ನು 2013ರಲ್ಲಿ ಲಾರ್ಡ್ಸ್ ಮೈದಾನದ ಪಂದ್ಯದ ನಂತರ ಕೈಬಿಡಲಾಗಿತ್ತು. ನಂತರ ತಂಡಕ್ಕೆ ಕಮ್ಬ್ಯಾಕ್ ಮಾಡಿದ ಲಿಯಾನ್ ಈ ಅದೇ ಮೈದಾನದಲ್ಲಿ ಸತತ 100 ಟೆಸ್ಟ್ ಆಡಿದ ಸಾಧನೆ ಮಾಡುತ್ತಿದ್ದಾರೆ.
122ನೇ ಟೆಸ್ಟ್ನಲ್ಲಿ 227 ಇನ್ನಿಂಗ್ಸ್ಗಳನ್ನು ಆಡಿರುವ ಲಿಯಾನ್ 2.94 ಎಕಾನಮಿ ದರದಲ್ಲಿ 495 ವಿಕೆಟ್ ಪಡೆದುಕೊಂಡಿದ್ದಾರೆ. 4 ಬಾರಿ 10 ವಿಕೆಟ್ ಹಾಗೇಯೇ 23 ಬಾರಿ 5 ವಿಕೆಟ್ ತೆಗೆದ ಸಾಧನೆ ಇವರದು. 50 ರನ್ ಕೊಟ್ಟು 8 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಟೆಸ್ಟ್ ಬೌಲಿಂಗ್ ಆಗಿದೆ.