ಮುಂಬೈ: ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 12 ರನ್ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಪಂಜಾಬ್ ತಂಡದ ಬೌಲರ್ಗಳು ಸ್ಟಾರ್ ಬ್ಯಾಟರ್ಗಳಿರುವ ಮುಂಬೈ ತಂಡವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಅದರಲ್ಲೂ ವಿಕೆಟ್ ಪಡೆಯದಿದ್ದರೂ ಸಹಾ ಅರ್ಶದೀಪ್ ಸಿಂಗ್ ಅವರ ಕರಾರುವಾಕ್ ಬೌಲಿಂಗ್ ಪ್ರದರ್ಶನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು.
ಮಯಾಂಕ್ ಅಗರ್ವಾಲ್, ಶಿಖರ್ ಧವನ್ ಅವರ ಅರ್ಧಶತಕಗಳ ನೆರವಿನಿಂದ ಪಂಜಾಬ್ 199ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ತಂಡ ಒಂದು ಹಂತದಲ್ಲಿ ಗೆಲುವಿನ ಸನಿಹ ಬಂದಿತ್ತು. ಆದರೆ, ರಬಾಡ ಒಡಿಯನ್ ಸ್ಮಿತ್ ಮತ್ತು ಅರ್ಶದೀಪ್ ಸಿಂಗ್ ಅದ್ಭುತವಾಗಿ ಬೌಲಿಂಗ್ ಮಾಡಿ ಪಂದ್ಯದ ಗತಿ ಬದಲಿಸಿದರು.
ಮುಂಬೈ ಈ ಪಂದ್ಯವನ್ನು ಗೆಲ್ಲಲು 18 ಎಸೆತಗಳಲ್ಲಿ 33 ರನ್ ಗಳಿಸಬೇಕಿತ್ತು. ನಿರ್ಣಾಯಕ 18ನೇ ಓವರ್ ಎಸೆದ ಅರ್ಶದೀಪ್ ಇನ್ಫಾರ್ಮ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಇದ್ದರೂ ಕೂಡ ಕೇವಲ 5 ರನ್ ಮಾತ್ರ ನೀಡಿ ಪಂದ್ಯದ ಸಮೀಕರಣವನ್ನು 12 ಎಸೆತಗಳಲ್ಲಿ 28 ರನ್ ಗಳಿಸುವ ಅನಿವಾರ್ಯತೆ ಸೃಷ್ಟಿಸಿದರು. ಈ ಪ್ರದರ್ಶನವನ್ನು ಪ್ರಶಂಸಿಸಿರುವ ಕಮೆಂಟೇಟರ್ ಹಾಗೂ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅರ್ಶದೀಪ್ ವಿಶ್ವಕಪ್ ತಂಡದಲ್ಲಿ ಆಡಿಸಬಹುದಾದಂತಹ ಪ್ರತಿಭೆ ಎಂದಿದ್ದಾರೆ.