ಬ್ರಿಡ್ಜ್‌ಟೌನ್ (ವೆಸ್ಟ್ ಇಂಡೀಸ್): ಹಿರಿಯ ವೇಗದ ಬೌಲಿಂಗ್ ಆಲ್‌ರೌಂಡರ್ ಆಂಡ್ರೆ ರಸೆಲ್ ಅವರು ಮುಂದಿನ ವಾರ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ವೆಸ್ಟ್ ಇಂಡೀಸ್‌ನ ಟಿ20 ತಂಡಕ್ಕೆ ಮರಳಿದ್ದಾರೆ. 2021ರ ಯುಎಇಯಲ್ಲಿ ನಡೆದ ಪುರುಷರ ಟಿ20 ವಿಶ್ವಕಪ್ ನಂತರ ಮೊದಲ ಬಾರಿಗೆ ರಸೆಲ್ ರಾಷ್ಟ್ರೀಯ ತಂಡದ ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ಆಡುತ್ತಿದ್ದಾರೆ.
ರಸೆಲ್ ಮಂಗಳವಾರ ಬ್ರಿಡ್ಜ್‌ಟೌನ್‌ನಲ್ಲಿ ನಡೆಯಲಿರುವ ಮೊದಲ ಟಿ20ಗೆ ಮುಂಚಿತವಾಗಿ ವೆಸ್ಟ್ ಇಂಡೀಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. 2024ರ ವಿಶ್ವಕಪ್ ತಯಾರಿ ಹಿನ್ನೆಲೆಯಲ್ಲಿ ಇಂಗ್ಲೆಂಡ್ 5ಟಿ 20 ಪಂದ್ಯಗಳ ಸರಣಿಯನ್ನು ಆಡುತ್ತಿದೆ. ಬಾರ್ಬಡೋಸ್ನಲ್ಲಿ 1, ಗ್ರೆನಡಾದಲ್ಲಿ 2 ಮತ್ತು ಟ್ರಿನಿಡಾಡ್ನಲ್ಲಿ 2 ಟಿ20 ಪಂದ್ಯಗಳು ನಡೆಯಲಿದೆ. ಇದಕ್ಕೂ ಮುಂಚಿತವಾಗಿ ನಡೆದ ಏಕದಿನ ಸರಣಿಯನ್ನು ವಿಂಡೀಸ್ 2-1 ರಿಂದ ಗೆದ್ದುಕೊಂಡಿದೆ.
2012 ಮತ್ತು 2016 ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಸದಸ್ಯರಾಗಿದ್ದ ರಸ್ಸೆಲ್ ಒಟ್ಟು 67 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಆಲ್‌ರೌಂಡರ್ ಮ್ಯಾಥ್ಯೂ ಫೋರ್ಡ್ ಅವರು ಏಕದಿನ ಸರಣಿಯ ನಂತರ ಟಿ20 ತಂಡದಲ್ಲೂ ಮುಂದುವರೆದಿದ್ದಾರೆ. ಫೋರ್ಡ್ಗೆ ಇದು ಚೊಚ್ಚಲ ಅಂತಾರಾಷ್ಟ್ರೀಯ ಸರಣಿಯಾಗಿದೆ. ಆಲ್‌ರೌಂಡರ್ ಶೆರ್ಫೇನ್ ರುದರ್‌ಫೋರ್ಡ್ ಸಹ 2020ರ ನಂತರ ಮತ್ತೆ ಟಿ20 ಸ್ವರೂಪದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.