ನವದೆಹಲಿ: ಆಡಿರುವ 6 ಪಂದ್ಯಗಳಿಂದ 5 ಸೋಲು ಕಂಡಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಶನಿವಾರವಷ್ಟೇ ಡೇವಿಡ್ ವಾರ್ನರ್ರನ್ನು ನಾಯಕತ್ವದಿಂದ ಕೆಳಗಿಳಿಸಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ರನ್ನು ತಂಡದ ನೂತನ ನಾಯಕನನ್ನಾಗಿ ನೇಮಿಸಿತ್ತು. ಇದೀಗ ಇಂದು ನಡೆಯುತ್ತಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಿಂದಲೂ ವಾರ್ನರ್ ಅವರನ್ನು ಕೈಬಿಡುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿದೆ.
ಪಂದ್ಯಕ್ಕೂ ಮುನ್ನ ಮಾತನಾಡಿದ ಸನ್ರೈಸರ್ಸ್ ಹೈದರಾಬಾದ್ ಕೋಚ್ ಟಾಮ್ ಮೂಡಿ, ವಾರ್ನರ್ ಈ ಪಂದ್ಯದಲ್ಲಿ ಆಡುತ್ತಿಲ್ಲ ಎಂಬುದನ್ನು ಖಚಿತಪಡಿಸುತ್ತೇನೆ. ತಂಡದ ಸಂಯೋಜನೆಯ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಂತದಲ್ಲಿ ಇಬ್ಬರು ವಿದೇಶಿ ಬ್ಯಾಟ್ಸ್ಮನ್ಗಳು, ಒಬ್ಬ ಆಲ್ರೌಂಡರ್ ಮತ್ತು ರಶೀದ್ ಖಾನ್ ಉತ್ತಮ ಸಂಯೋಜನೆಯಾಗಿದೆ. ಬೈರ್ಸ್ಟೋವ್ ಹಾಗೂ ಕೇನ್ ವಿಲಿಯಮ್ಸನ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಹಾಗಾಗಿ ಕಠಿಣವಾದರೂ ವಾರ್ನರ್ ವಿರುದ್ಧ ಈ ನಿರ್ಧಾರವನ್ನು ನಾವು ತೆಗೆದುಕೊಳ್ಳಲೇಬೇಕಾಗಿದೆ ಎಂದು ಮೂಡಿ ಹೇಳಿದ್ದಾರೆ.
ಈ ವಿಷಯ ಕೇಳಿ ಡೇವಿಡ್ ಆಘಾತಕ್ಕೊಳಗಾಗಿದ್ದಾರೆ ಮತ್ತು ನಿರಾಶೆಗೂ ಒಳಗಾಗಿದ್ದಾರೆ. ಆದರೆ ಫ್ರಾಂಚೈಸಿಯ ದೃಷ್ಟಿಕೋನದಿಂದ ತಂಡಕ್ಕೆ ಒಳ್ಳೆಯದನ್ನು ಮಾಡಬೇಕಾಗಿರುವುದರಿಂದ ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.